January20, 2026
Tuesday, January 20, 2026
spot_img

ಶಿವಕುಮಾರ ಸ್ವಾಮೀಜಿ 7ನೇ ಪುಣ್ಯ ಸಂಸ್ಮರಣೆ: ನಾಳೆ ತುಮಕೂರಿಗೆ ಉಪರಾಷ್ಟ್ರಪತಿ ಭೇಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಡೆದಾಡುವ ದೇವರು ಸಿದ್ಧಗಂಗಾ ಮಠದ ಶಿವೈಕ್ಯ ಡಾ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿ ನಾಳೆಗೆ (ಜನವರಿ 21) ಏಳು ವರ್ಷ. ಈ ಹಿನ್ನೆಲೆ ನಾಳೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಡಾ. ಶಿವಕುಮಾರ ಸ್ವಾಮೀಜಿಗಳ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್​​​​​ ಅವರು ಭಾಗಿಯಾಗುತ್ತಿದ್ದಾರೆ.

ಹೀಗಾಗಿ ಸಿದ್ಧಗಂಗಾ ಮಠದಲ್ಲಿ ಪೊಲೀಸ್ ಬಿಗಿಭದ್ರತೆ ನಿಯೋಜನೆ ಮಾಡಲಾಗಿದೆ.

ನಾಳೆ ಬೆಳಗ್ಗೆ 10:50ಕ್ಕೆ ಮಠಕ್ಕೆ ಆಗಮಿಸಲಿರುವ ಉಪರಾಷ್ಟ್ರಪತಿಗಳು ಮೊದಲು ಶಿವಕುಮಾರ ಶ್ರೀಗಳ ಗದ್ದಿಗೆಗೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ 11 ಗಂಟೆಗೆ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 1 ಗಂಟೆಯ ವೇದಿಕೆ ಕಾರ್ಯಕ್ರಮದ ಬಳಿಕ 12 ಗಂಟೆಗೆ ಉಪರಾಷ್ಟ್ರಪತಿಗಳು ವಾಪಸ್ ತೆರಳಲಿದ್ದಾರೆ. ಉಪ ರಾಷ್ಟ್ರಪತಿಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ವಿ ಸೋಮಣ್ಣ ಸಾಥ್ ನೀಡಲಿದ್ದಾರೆ.

ಉಪ ರಾಷ್ಟ್ರಪತಿಗಳ ಆಗಮನ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಇನ್ನು ಮಠದಲ್ಲಿ ನಾಳೆ ಬೆಳಗ್ಗೆ 5 ಗಂಟೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ. ಶಿವಕುಮಾರ ಶ್ರೀಗಳ ಗದ್ದಿಗೆಗೆ ಮಂತ್ರಘೋಷಗಳ ಮೂಲಕ ವಿಶೇಷ ಪೂಜೆ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಶಿವಕುಮಾರ ಶ್ರೀಗಳ ಪುತ್ಥಳಿಯನ್ನು ರುದ್ರಾಕ್ಷಿ ಮಂಟಪದಲ್ಲಿ ಮೆರವಣಿಗೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮಿಜಿ, ಸದ್ಗುರು ಶ್ರೀ ಮಧುಸೂದನ ಸಾಯಿ, ಸಿದ್ದಗಂಗಾ ಮಠದ ಉತ್ತರಾಧಿಕಾರಿ ಶಿವಸಿದ್ದೇಶ್ವರ ಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ.

Must Read