January21, 2026
Wednesday, January 21, 2026
spot_img

ಗಲ್ಫ್ to ಬೆಂಗಳೂರು ‘ಡೀಸೆಲ್’ ದಂಧೆ: ತೆರಿಗೆಗೆ ಕನ್ನ ಹಾಕುತ್ತಿದ್ದ ಬೃಹತ್ ಜಾಲ ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಲ್ಲಿಯವರೆಗೆ ನಾವು ಚಿನ್ನ, ಡ್ರಗ್ಸ್ ಕಳ್ಳಸಾಗಣೆ ಬಗ್ಗೆ ಕೇಳಿದ್ದೆವು. ಆದರೆ ಈಗ ಅಚ್ಚರಿಯ ರೀತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡೀಸೆಲ್ ಕಳ್ಳಸಾಗಣೆ ಜಾಲವೊಂದು ಪತ್ತೆಯಾಗಿದೆ. ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಅಕ್ರಮವಾಗಿ ತೈಲ ಸಾಗಿಸುತ್ತಿದ್ದ ಬೃಹತ್ ದಂಧೆಯನ್ನು ಬೆಳಗಾವಿಯ ಮಾಳಮಾರುತಿ ಠಾಣೆಯ ಪೊಲೀಸರು ಯಶಸ್ವಿ ಕಾರ್ಯಾಚರಣೆಯ ಮೂಲಕ ಬಯಲಿಗೆಳೆದಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಇನ್ಸ್‌ಪೆಕ್ಟರ್ ಬಿ.ಆರ್. ಗಡ್ಡೇಕರ್ ನೇತೃತ್ವದ ತಂಡ, ಮುಂಬೈನಿಂದ ಬೆಂಗಳೂರಿಗೆ ತೆರಳುತ್ತಿದ್ದ ಟ್ಯಾಂಕರ್ ಒಂದನ್ನು ಬೆಳಗಾವಿ ಬಳಿ ತಡೆದು ತಪಾಸಣೆ ನಡೆಸಿತು. ಈ ವೇಳೆ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಸುಮಾರು 17 ಲಕ್ಷ ರೂ. ಮೌಲ್ಯದ 17 ಸಾವಿರ ಲೀಟರ್ ಡೀಸೆಲ್ ಪತ್ತೆಯಾಗಿದೆ. ಪೊಲೀಸರು ತಕ್ಷಣವೇ ಟ್ಯಾಂಕರ್ ಸಮೇತ ಡೀಸೆಲ್ ಅನ್ನು ಜಪ್ತಿ ಮಾಡಿದ್ದಾರೆ.

ತುಮಕೂರು ಮೂಲದ ಟ್ಯಾಂಕರ್ ಮಾಲೀಕ ಅರಿಹಂತ ಎಂಬಾತನ ಭಾಗಿಯಾಗಿರುವಿಕೆ ಪತ್ತೆಯಾಗಿದ್ದು, ಮಹಾರಾಷ್ಟ್ರ ಮತ್ತು ರಾಜಸ್ಥಾನದ ಪ್ರಭಾವಿ ವ್ಯಕ್ತಿಗಳು ಈ ದಂಧೆಯ ಹಿಂದಿರುವ ಶಂಕೆ ವ್ಯಕ್ತವಾಗಿದೆ.

ಗಲ್ಫ್ ದೇಶಗಳಿಂದ ಹಡಗುಗಳ ಮೂಲಕ ತೈಲ ನಿಗಮಗಳಿಗೆ ತೈಲ ಬರುವಾಗ, ಕೆಲವು ಹಡಗು ಮಾಲೀಕರೊಂದಿಗೆ ಶಾಮೀಲಾಗಿ ಸ್ಮಗ್ಲರ್‌ಗಳು ಅಕ್ರಮವಾಗಿ ಡೀಸೆಲ್ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.

ಈ ಅಕ್ರಮ ಡೀಸೆಲ್ ಅನ್ನು ಅರ್ಧ ಬೆಲೆಗೆ ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಪೆಟ್ರೋಲ್ ಬಂಕ್‌ಗಳಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು.

ಈ ಅಕ್ರಮ ದಂಧೆಯಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕೋಟ್ಯಂತರ ರೂಪಾಯಿಗಳ ತೆರಿಗೆ ನಷ್ಟವಾಗುತ್ತಿತ್ತು. ಹಲವು ವರ್ಷಗಳಿಂದ ಯಾರಿಗೂ ಅನುಮಾನ ಬರದಂತೆ ನಡೆಯುತ್ತಿದ್ದ ಈ ವ್ಯವಹಾರ ಈಗ ಪೊಲೀಸ್ ಬಲೆಗೆ ಬಿದ್ದಿದೆ.

Must Read