January21, 2026
Wednesday, January 21, 2026
spot_img

WPL | ಸೋಲಿನ ಹ್ಯಾಟ್ರಿಕ್ ನಡುವೆಯೂ ಕುಗ್ಗದ ಮುಂಬೈ ಹವಾ: ಏನಿದು ನೆಟ್ ರನ್ ರೇಟ್ ಮ್ಯಾಜಿಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್ 4ರಲ್ಲಿ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಆದರೆ, ವಿಚಿತ್ರವೆಂದರೆ ಈ ಸರಣಿ ಸೋಲುಗಳ ಹೊರತಾಗಿಯೂ ತಂಡ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸೀಸನ್‌ನ ಮೊದಲ ಪಂದ್ಯದಲ್ಲೇ ಆರ್‌ಸಿಬಿ ವಿರುದ್ಧ ಮುಂಬೈ ಸೋತಿತ್ತು. ನಂತರ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ 4 ಅಂಕಗಳನ್ನು ಗಳಿಸಿತ್ತು. ಈ ಎರಡು ಗೆಲುವುಗಳ ನಂತರ ಮುಂಬೈಗೆ ಗ್ರಹಣ ಹಿಡಿದಂತಿದೆ. ಯುಪಿ ವಾರಿಯರ್ಸ್ ವಿರುದ್ಧದ ಎರಡೂ ಪಂದ್ಯಗಳು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸತತವಾಗಿ ಮುಗ್ಗರಿಸಿದೆ.

ಮುಂಬೈ ಆಡಿದ 6 ಪಂದ್ಯಗಳಲ್ಲಿ 4ರಲ್ಲಿ ಸೋತಿದ್ದರೂ, ಉಳಿದ ತಂಡಗಳ ಕಳಪೆ ಪ್ರದರ್ಶನ ಮುಂಬೈ ಪಾಲಿಗೆ ವರದಾನವಾಗಿದೆ. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಕಾಯ್ದುಕೊಳ್ಳಲು ಮುಖ್ಯ ಕಾರಣ ತಂಡದ ನೆಟ್ ರನ್ ರೇಟ್.

ಡೆಲ್ಲಿ, ಯುಪಿ ಮತ್ತು ಗುಜರಾತ್ ತಂಡಗಳು ಸಹ ತಲಾ 2 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿವೆ. ಆದರೆ, ಈ ಮೂರೂ ತಂಡಗಳ ರನ್ ರೇಟ್ ಮೈನಸ್‌ನಲ್ಲಿದೆ. ಮುಂಬೈ ಇಂಡಿಯನ್ಸ್ ಮಾತ್ರ +0.046 ರನ್ ರೇಟ್ ಹೊಂದುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಮೇಲುಗೈ ಸಾಧಿಸಿದೆ.

ಸೋಲಿನ ಹ್ಯಾಟ್ರಿಕ್‌ನಿಂದ ಕಂಗೆಟ್ಟಿರುವ ಹರ್ಮನ್ ಪಡೆ, ಮುಂದಿನ ಪಂದ್ಯಗಳಲ್ಲಿ ಗೆಲುವಿನ ಹಳಿಗೆ ಮರಳದಿದ್ದರೆ ಪ್ಲೇ-ಆಫ್ ಹಾದಿ ಕಠಿಣವಾಗುವುದರಲ್ಲಿ ಸಂಶಯವಿಲ್ಲ.

Must Read