ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಹಿಂದು ಸಮುದಾಯದವರ ಸರಣಿ ಸಾವುಗಳ ಆತಂಕದ ನಡುವೆಯೇ, ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಹಿಂದು ವಿದ್ಯಾರ್ಥಿಯೊಬ್ಬ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ನವೋಗಾಂವ್ ಜಿಲ್ಲೆಯ ಕಾಲಿತಾಲಾ ಸ್ಮಶಾನದ ಸಮೀಪವಿರುವ ನದಿಯಲ್ಲಿ ಈ ಘಟನೆ ಸಂಭವಿಸಿದೆ.
ಮೃತ ವಿದ್ಯಾರ್ಥಿಯನ್ನು ಬೊಗುರಾ ಜಿಲ್ಲೆಯ ಸಂತಾಹಾರ್ ನಿವಾಸಿ ರಮೇಶ್ ಚಂದ್ರ ಅವರ ಪುತ್ರ ಅಭಿ ಎಂದು ಗುರುತಿಸಲಾಗಿದೆ. ಈತ ನವೋಗಾಂವ್ ಸರ್ಕಾರಿ ಕಾಲೇಜಿನಲ್ಲಿ ಮ್ಯಾನೇಜ್‌ಮೆಂಟ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದನು. ಜನವರಿ 11ರಂದು ಮನೆಯಲ್ಲಿ ಸಣ್ಣಪುಟ್ಟ ಜಗಳವಾಡಿಕೊಂಡು ಹೊರಬಂದಿದ್ದ ಅಭಿ, ಅಂದಿನಿಂದ ನಾಪತ್ತೆಯಾಗಿದ್ದನು.
ನದಿಯಲ್ಲಿ ಪತ್ತೆಯಾದ ಶವದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದಾಗ, ಅಭಿ ಧರಿಸಿದ್ದ ಬಟ್ಟೆಗಳ ಆಧಾರದ ಮೇಲೆ ಕುಟುಂಬಸ್ಥರು ಶವವನ್ನು ಗುರುತಿಸಿದ್ದಾರೆ. ಶನಿವಾರ ಮಧ್ಯಾಹ್ನ ಶವ ಪತ್ತೆಯಾಗಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ.
ಅಭಿಯ ಸಾವು ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕ ಕೊಲೆಯೋ ಎಂಬ ಬಗ್ಗೆ ಸದ್ಯಕ್ಕೆ ಸ್ಪಷ್ಟನೆ ಸಿಕ್ಕಿಲ್ಲ. ಸ್ಥಳೀಯರಲ್ಲಿ ಈ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿದ್ದು, ಪೊಲೀಸರ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ.


