ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಸಮಾವೇಶಕ್ಕೆ ತೆರಳುವ ವೇಳೆ ತಾಂತ್ರಿಕ ಅಡಚಣೆ ಎದುರಿಸಿದ್ದಾರೆ. ಮಂಗಳವಾರ ಸಂಜೆ ಜಂಟಿ ನೆಲೆ ಆಂಡ್ರ್ಯೂಸ್‌ನಿಂದ ಹೊರಟಿದ್ದ ಅಧ್ಯಕ್ಷರ ಅಧಿಕೃತ ‘ಏರ್‌ಫೋರ್ಸ್ ಒನ್’ ವಿಮಾನದಲ್ಲಿ ವಿದ್ಯುತ್ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನವನ್ನು ಮರಳಿ ಬೇಸ್‌ಗೆ ತರಲಾಯಿತು.
ವಿಮಾನ ಹಾರಾಟ ಆರಂಭಿಸಿದ ಸ್ವಲ್ಪ ಸಮಯದ ನಂತರ ಪ್ರೆಸ್ ಕ್ಯಾಬಿನ್‌ನ ದೀಪಗಳು ಕ್ಷಣಕಾಲ ಆಫ್ ಆಗಿದ್ದವು. ಈ ವಿದ್ಯುತ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಪೈಲಟ್‌ಗಳು ಮತ್ತು ಭದ್ರತಾ ತಂಡ, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ವಾಪಸ್ ತಿರುಗಿಸಲು ನಿರ್ಧರಿಸಿದರು. ಸುಮಾರು ಒಂದು ಗಂಟೆಯ ಆತಂಕದ ನಂತರ ವಿಮಾನವು ವಾಷಿಂಗ್ಟನ್‌ನ ಜಂಟಿ ಬೇಸ್ ಆಂಡ್ರ್ಯೂಸ್‌ನಲ್ಲಿ ಸುರಕ್ಷಿತವಾಗಿ ಇಳಿಯಿತು.
ವೈಟ್‌ಹೌಸ್ ಪ್ರೆಸ್ ಸೆಕ್ರಟರಿ ಕ್ಯಾರೊಲೈನ್ ಲೆವಿಟ್ ಈ ಕುರಿತು ಮಾಹಿತಿ ನೀಡಿದ್ದು, ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ವಿಮಾನ ಮರಳಿದ ನಂತರ, ಅಧ್ಯಕ್ಷ ಟ್ರಂಪ್ ಮತ್ತು ಅವರ ನಿಯೋಗವು ವಿಳಂಬ ಮಾಡದೆ ಬ್ಯಾಕಪ್ ವಿಮಾನವಾದ (Boeing 757) ಮೂಲಕ ದಾವೋಸ್‌ಗೆ ತಮ್ಮ ಪ್ರಯಾಣವನ್ನು ಮುಂದುವರಿಸಿದರು.


