ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಂತ ಮನೆಯೆಂಬ ಬಡ ಮತ್ತು ಮಧ್ಯಮ ವರ್ಗದ ಜನರ ದಶಕಗಳ ಕನಸು ಕೊನೆಗೂ ನನಸಾಗುವ ಕಾಲ ಬಂದಿದೆ. ರಾಜ್ಯಾದ್ಯಂತ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಾದ ಸುಮಾರು 42,000 ಮನೆಗಳ ಹಂಚಿಕೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಇದೇ ಜನವರಿ 24ರಂದು ಹುಬ್ಬಳ್ಳಿಯಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ.
ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ಜಿ+3 ಮಾದರಿಯ ಒಂದು ಸಾವಿರಕ್ಕೂ ಹೆಚ್ಚು ಸುಸಜ್ಜಿತ ಮನೆಗಳನ್ನು ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಈ ಯೋಜನೆಗೆ ಅನುಮೋದನೆ ಸಿಕ್ಕಿತ್ತು. ಕಾಮಗಾರಿ ವಿಳಂಬ ಮತ್ತು ಗಣ್ಯರ ದಿನಾಂಕ ನಿಗದಿಯಾಗದ ಕಾರಣ ಕಳೆದ ಒಂದು ವರ್ಷದಿಂದ ಫಲಾನುಭವಿಗಳು ಕಾಯುತ್ತಿದ್ದರು. ಈಗ ವಸತಿ ಸಚಿವ ಜಮೀರ್ ಅಹ್ಮದ್ ಅವರ ವಿಶೇಷ ಆಸಕ್ತಿಯ ಫಲವಾಗಿ ಈ ‘ಗೃಹ ಪ್ರವೇಶ’ಕ್ಕೆ ದಿನಾಂಕ ನಿಗದಿಯಾಗಿದೆ.
ಈ ಐತಿಹಾಸಿಕ ಕ್ಷಣಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಸಂಪುಟದ ಹಲವು ಸಚಿವರು ಸಾಕ್ಷಿಯಾಗಲಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಜನರಿಗಾಗಿ ಸಾರಿಗೆ ವ್ಯವಸ್ಥೆ ಮತ್ತು ಭೋಜನದ ವ್ಯವಸ್ಥೆಯನ್ನು ಅದ್ದೂರಿಯಾಗಿ ಮಾಡಲಾಗುತ್ತಿದ್ದು, ಮಂಟೂರು ರಸ್ತೆಯ ಸುತ್ತಮುತ್ತ ಹಬ್ಬದ ವಾತಾವರಣ ಮನೆಮಾಡಿದೆ.
ಅನೇಕ ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದು ನೈಜ ಸೂರನ್ನೇ ಕಾಣದ ಸಾವಿರಾರು ಕುಟುಂಬಗಳಿಗೆ ಜನವರಿ 24ರ ಸಂಜೆ ಹೊಸ ಬದುಕಿನ ಭರವಸೆಯಾಗಲಿದೆ.


