ಹೊಸದಿಗಂತ ಬಳ್ಳಾರಿ:
ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎನ್ನುವ ಆವೇಶದಲ್ಲಿ ಅಚಾತುರ್ಯದಿಂದ ಹೆಸರು ಪ್ರಸ್ತಾಪವಾಗಿದೆಯೇ ಹೊರತು, ವೈಯಕ್ತಿಕವಾಗಿ ನೋವು ಕೊಡುವ ಯಾವುದೇ ಉದ್ದೇಶ ನನಗಿರಲಿಲ್ಲ,” ಎಂದು ಸ್ಪಷ್ಟಪಡಿಸಿದರು.
ಕಳೆದ ಜ. 17ರಂದು ಎಪಿಎಂಸಿ ಆವರಣದಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಸಂತ್ರಸ್ತೆಯ ವಿವರಗಳನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಶ್ರೀರಾಮುಲು ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಸಂತ್ರಸ್ತೆ ನನಗೆ ಮಗಳಿದ್ದಂತೆ. ಅವರ ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಅಧಿಕಾರವಿಲ್ಲ ಎಂಬ ಕಾರಣಕ್ಕೆ ನನ್ನ ಮೇಲೆ ಕೇಸ್ ಹಾಕಿಸಲಾಗಿದೆ. ಇದಕ್ಕೆಲ್ಲ ಕಾಲವೇ ಉತ್ತರ ನೀಡಲಿದೆ,” ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.
ಇದೇ ವೇಳೆ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಬಗ್ಗೆ ಕಿಡಿಕಾರಿದ ಅವರು, ಬಳ್ಳಾರಿಯಲ್ಲಿ ಡ್ರಗ್ಸ್, ಮಟಕಾ ಮತ್ತು ಮರಳು ದಂಧೆ ಮಿತಿಮೀರಿದೆ. ಇಂತಹ ದಂಧೆಗಳಿಂದಲೇ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಸಂತ್ರಸ್ತೆಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಭರವಸೆ ನೀಡಿದರು.


