ಹೊಸದಿಗಂತ ಮಂಡ್ಯ:
ಪರಿಚಯದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಅಮಾನುಷವಾಗಿ ಹತ್ಯೆಗೈದಿದ್ದ ಇಬ್ಬರು ಅಪರಾಧಿಗಳಿಗೆ ಇಲ್ಲಿನ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಶಿವಕುಮಾರ (26) ಮತ್ತು ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದ ರಾಜೇಶ (32) ಶಿಕ್ಷೆಗೊಳಗಾದ ನರಾಧಮರು.
ದೋಷಿಗಳಾದ ಶಿವಕುಮಾರ ಮತ್ತು ರಾಜೇಶ ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ಇದೇ ವೃತ್ತಿಯಲ್ಲಿದ್ದ ಹುಣಸೂರು ಮೂಲದ ಮೀನಾ ಎಂಬಾಕೆಯೊಂದಿಗೆ ಇವರು ಸ್ನೇಹ ಬೆಳೆಸಿದ್ದರು. 2020ರ ಮಾರ್ಚ್ 3ರಂದು ರಾತ್ರಿ ವೇಳೆ, ಕಾಮುಕ ಉದ್ದೇಶದಿಂದ ಮೀನಾಳನ್ನು ಶ್ರೀರಂಗಪಟ್ಟಣದ ಎಂ.ಕೆ. ಆಯಿಲ್ ಫ್ಯಾಕ್ಟರಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆಯ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಮೀನಾ ಎಚ್ಚರಿಸಿದ್ದಳು. ಇದರಿಂದ ಬೆದರಿದ ಆರೋಪಿಗಳು, ಆಕೆಯ ಕುತ್ತಿಗೆಗೆ ಆಕೆ ಧರಿಸಿದ್ದ ವೇಲ್‌ನಿಂದಲೇ ಬಿಗಿದು ಕೊಲೆ ಮಾಡಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಗುರುತು ಸಿಗದಂತೆ ಮಾಡಲು ಶವದ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಸಾಕ್ಷ್ಯ ನಾಶಪಡಿಸಿ ಪರಾರಿಯಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳ ಮೇಲಿನ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಈ ಮಹತ್ವದ ತೀರ್ಪು ನೀಡಿದೆ.


