ಹೊಸದಿಗಂತ ವರದಿ ತುಮಕೂರು:
ಅನಿಶ್ಚಿತತೆ, ವಿಭಜನೆ ಮತ್ತು ಅಶಾಂತಿಯನ್ನು ಸೃಷ್ಟಿಸುತ್ತಿರುವ ಈ ಯುಗದಲ್ಲಿ ಸಿದ್ಧಗಂಗೆಯ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಜೀವನ ನೈತಿಕ ದಿಕ್ಕನ್ನು ಸೂಚಿಸುವ ಪ್ರಜ್ವಲಿಸುವ ನಂದಾದೀಪವಾಗಿದೆ ಎಂದು ಭಾರತದ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದ್ದಾರೆ.
ತುಮಕೂರು ನಗರದ ಸಿದ್ದಗಂಗೆ ಮಠದಲ್ಲಿ ಬುಧವಾರ ನಡೆದ ಶ್ರೀ ಶಿವಕುಮಾರ ಸ್ವಾಮೀಜಿಯವರ 7ನೇ ಪುಣ್ಯಸಂಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾಗಿ ಏಳು ವರ್ಷಗಳು ತುಂಬಿದರೂ ಶ್ರೀಗಳ ಸಾನಿಧ್ಯ ಒಂದಿಷ್ಟೂ ಕುಂದಿಲ್ಲ. ಬದಲಾಗಿ ಇನ್ನೂ ಪ್ರಕರವಾಗಿದೆ. ಅನಿಶ್ಚಿತತೆ, ಅಶಾಂತಿ ಸೃಷ್ಟಿಸುತ್ತಿರುವ ಈ ಯುಗದಲ್ಲಿ ಸ್ವಾಮೀಜಿಯವರ ಜೀವನ ನೈತಿಕ ದಿಕ್ಕನ್ನು ಸೂಚಿಸುವ ನಂದಾದೀಪವಾಗಿದೆ ಎಂದು ಅವರು ಹೇಳಿದರು.
19ನೇ ಶತಮಾನದಲ್ಲಿ ಅಟವಿ ಸ್ವಾಮೀಜಿಯವರ ಆದರ್ಶಗಳನ್ನು ಅನುಸರಿಸಿ ಶ್ರೀಮಠವು ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಗಳನ್ನು ಮಾಡುತ್ತಾ ಬಂದಿರುವುದು ಸಂತೋಷದ ವಿಷಯವಾಗಿದ್ದು, ಶ್ರೀ ಶಿವಕುಮಾರ ಸ್ವಾಮೀಜಿಯವರು ಮಠದ ಜವಾಬ್ದಾರಿವಹಿಸಿಕೊಂಡು ಶ್ರೀಮಠದಲ್ಲಿ ಕೇವಲ ಆಧ್ಯಾತ್ಮಿಕ ಕೇಂದ್ರವಾಗಿಸದೆ ಸಮಾಜಮುಖಿಯಾಗಿ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಾ ಮಾದರಿಯಾಗಿದ್ದಾರೆ. ಮುಂದುವರಿದು ಪ್ರಸ್ತುತ ಸ್ವಾಮೀಜಿಯವರು ತ್ರಿವಿಧ ದಾಸೋಹವನ್ನು ಮುಂದುವರಿಸುತ್ತಾ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ಜಾತಿ ಮತಗಳನ್ನು ಮೀರಿ ತ್ರಿವಿಧ ದಾಸೋಹದಲ್ಲಿ ಸೇವೆ ಮಾಡುತ್ತಿರುವ ಶ್ರೀ ಸಿದ್ದಗಂಗಾ ಮಠವು ಐತಿಹಾಸಿಕ ಧಾರ್ಮಿಕ ಕೇಂದ್ರವಾಗಿದೆ. ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡುವುದೇ ನಮ್ಮ ದೇಶದ ಸಂಸ್ಕøತಿಯಾಗಿದ್ದು ಶ್ರೀಮಠದ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಪ್ರಸ್ತುತತೆ ಎಂದರು.
ಶ್ರೀ ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಮಾತನಾಡಿ, 89 ವರ್ಷಗಳ ಕಾಲ ಶ್ರೀಮಠದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ತಮ್ಮ ಹಿರಿಯ ಶ್ರೀಗಳು ಸದಾ ಕಾಯಕ ಭಾವನೆ ಜಾಗೃತವಾಗಿರಬೇಕು, ಶ್ರೀಮಠದಲ್ಲಿ ದಾಸೋಹ, ಮಕ್ಕಳ ಶಿಕ್ಷಣ ಎಂದೂ ನಿಲ್ಲಬಾರದು ಎಂದು ವಚನ ನೀಡಿದ್ದಾರೆ. ಇಂದಿಗೂ ಲಕ್ಷಾಂತರ ಮಕ್ಕಳಿಗೆ, ಭಕ್ತರಿಗೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು.
ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಮಾತನಾಡಿ, ಅನ್ನ, ಅಕ್ಷರ, ಆಶ್ರಯ ಎಷ್ಟು ಮುಖ್ಯ ಎಂಬುದೇ ಇಂದಿನ ಕಾರ್ಯಕ್ರಮದ ಸಂದೇಶ. ಜಾತಿ ವರ್ಗಗಳನ್ನು ಮೀರಿ ಸಮಾಜದಲ್ಲಿ ಸೇವೆ ಮಾಡುವ ಶ್ರೀಮಠದ ತತ್ವ ಸಿದ್ಧಾಂತವನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆ ಭಾರತದ ಭವಿಷ್ಯದ ದೃಷ್ಟಿಯಿಂದ ಅಗತ್ಯವಿದೆ ಎಂದರು.
ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಗಣ್ಯರನ್ನು ಸ್ವಾಗತಿಸಿದರು. ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಜಯವಿಭವಸ್ವಾಮಿ , ವಿ.ಸೋಮಶೇಖರ್ ಇದ್ದರು.


