ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಳೆಯಿಂದ ಜ.31ರವರೆಗೆ ಜಂಟಿ ವಿಶೇಷ ಅಧಿವೇಶನ ನಡೆಯಲಿದೆ. ಉಭಯ ಸದನಗಳನ್ನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ. ಅಧಿವೇಶನಕ್ಕೆ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿಧಾನಪರಿಷತ್ ನ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಭಾಪತಿಗಳು, ವಾಡಿಕೆಯಂತೆ ವರ್ಷದ ಮೊದಲ ಅಧಿವೇಶನ ರಾಜ್ಯಪಾಲರ ಭಾಷಣದ ಮೂಲಕ ಆರಂಭವಾಗಲಿದೆ. ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ಉಭಯ ಕಲಾಪಗಳನ್ನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಈ ಭಾಷಣ ಮೇರೆಗೆ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುತ್ತದೆ. ಇದೇ ವೇಳೆ, ಪ್ರಶ್ನೋತ್ತರ ಕಲಾಪ, ಗಮನ ಸೆಳೆಯುವ ಸೂಚನೆ, ವಿಶೇಷ ಚರ್ಚೆ ಸೇರಿದಂತೆ ಎಲ್ಲಾ ರೀತಿಯ ಚರ್ಚೆಗಳು ಕಲಾಪದಲ್ಲಿ ನಡೆಯಲಿದೆ ಎಂದರು.
ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದ ಕೊನೆಯ ದಿನ ರಾತ್ರಿ 11.30ರವರೆಗೆ ಕಲಾಪ ನಡೆಸಿದ್ದೆ. ಈ ಬಾರಿಯೂ ಅಜೆಂಡಾ ಮುಗಿಯವ ತನಕ ಕಲಾಪವನ್ನ ಮುಂದೂಡಿಕೆ ಮಾಡುವುದಿಲ್ಲ. ಸರ್ಕಾರ ಸಿದ್ದಪಡಿಸಿದ ಅಂಶಗಳನ್ನ ರಾಜ್ಯಪಾಲರು ಮಂಡಿಸಬೇಕು. ಇದಾದ ಬಳಿಕ ಚರ್ಚೆ ನಡೆಸಲಾಗುವುದು. ಅಲ್ಲದೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಕೇರಳ ಹಾಗೂ ತಮಿಳುನಾಡಿನಲ್ಲಿ ರಾಜ್ಯಪಾಲರು ಹಾಗೂ ಸರ್ಕಾರಗಳ ನಡುವೆ ಘರ್ಷಣೆ ರೀತಿ ರಾಜ್ಯದಲ್ಲೂ ಅದೇ ರೀತಿ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಹೊರಟ್ಟಿ, ನಮ್ಮ ರಾಜ್ಯಪಾಲರು ಆ ರೀತಿ ಮಾಡುವುದಿಲ್ಲ ಎಂಬ ವಿಶ್ವಾಸವಿದೆ. ಸರ್ಕಾರ ಏನು ಬರೆದುಕೊಡುತ್ತದೆಯೋ ಅದನ್ನೇ ಓದಬೇಕು. ಸಂವಿಧಾನದ ವಿರುದ್ಧ ಇದ್ದರೂ ಓದುವುದು ಅನಿವಾರ್ಯ ಎಂದರು.
ರಾಜ್ಯಪಾಲರಿಗೆ ಸರ್ಕಾರವು ಸಹ ಸಂವಿಧಾನಾತ್ಮಕವಾಗಿರುವ ವಿಚಾರಗಳನ್ನು ಭಾಷಣದ ಅಂಶದಲ್ಲಿರುವಂತೆ ನೋಡಿಕೊಳ್ಳಬೇಕಿದೆ. ಇದು ಸರ್ಕಾರದ ಜವಾಬ್ದಾರಿ ಕೂಡಾ ಆಗಿದೆ ಎಂದರು.


