ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಗುರುವಿನ ಸ್ಥಾನದಲ್ಲಿದ್ದು ಪಾಠ ಮಾಡಬೇಕಾದ ಉಪನ್ಯಾಸಕನೊಬ್ಬ, ವಿದ್ಯಾರ್ಥಿನಿಯನ್ನೇ ಕರೆದುಕೊಂಡು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಖಾಸಗಿ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಕಾಣೆಯಾಗಿ 11 ದಿನ ಕಳೆದರೂ ಪೊಲೀಸರು ಪತ್ತೆ ಮಾಡದ ಹಿನ್ನೆಲೆಯಲ್ಲಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಥಣಿ ಪಟ್ಟಣದ ಖಾಸಗಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಮೋನಿಕಾ ಉಲ್ಲಾಸ್ ಬೋಸಲೆ (23) ಎಂಬ ವಿದ್ಯಾರ್ಥಿನಿ ಕಳೆದ ಜನವರಿ 8 ರಿಂದ ಕಾಣೆಯಾಗಿದ್ದಾರೆ. ಅದೇ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ಪವನಕುಮಾರ್ ಶೀಲಗಾರ (28) ಎಂಬಾತ ಮೋನಿಕಾಳೊಂದಿಗೆ ನಾಪತ್ತೆಯಾಗಿದ್ದಾನೆ. ಮಗಳಿಗೆ ಪ್ರೀತಿ ಪ್ರೇಮದ ಗುಂಗು ಹಿಡಿಸಿ, ಬ್ರೈನ್ ವಾಶ್ ಮಾಡಿ ಈತ ಕರೆದುಕೊಂಡು ಹೋಗಿದ್ದಾನೆ ಎಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.
ವಿದ್ಯಾರ್ಥಿನಿ ನಾಪತ್ತೆಯಾದ ಮರುದಿನವೇ ಅಂದರೆ ಜನವರಿ 9 ರಂದು ಪೋಷಕರು ಅಥಣಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ದೂರು ನೀಡಿ 11 ದಿನಗಳು ಕಳೆದರೂ ಸಹ ಪೊಲೀಸರು ಇಬ್ಬರ ಸುಳಿವು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ‘ನಮ್ಮ ಮಗಳನ್ನು ನಂಬಿಸಿ ಕರೆದೊಯ್ದಿದ್ದಾರೆ, ಆಕೆಯ ಜೀವಕ್ಕೆ ಅಪಾಯವಿದ್ದರೆ ಯಾರು ಹೊಣೆ?’ ಎಂದು ತಂದೆ ಉಲ್ಲಾಸ್ ಬೋಸಲೆ ಕಣ್ಣೀರಿಡುತ್ತಿದ್ದಾರೆ.


