ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರ ವಿಶೇಷ ಅಧಿವೇಶನ ಕರೆದು ಕೇಂದ್ರ ಸರ್ಕಾರ ಯೋಜನೆಗೆ ಅಡ್ಡಗಾಲು ಹಾಕಲು ಪ್ರಯತ್ನಿಸುತ್ತಿದೆ. ರಾಜ್ಯ ಸರ್ಕಾರಕ್ಕೆ ಅಧಿವೇಶನ ನಡೆಸುವ ಅಗತ್ಯವಿರಲಿಲ್ಲ. ನೇರವಾಗಿ ಸಚಿವರು ಅಥವಾ ಪ್ರಧಾನಿ ಅವರನ್ನು ಭೇಟಿ ಮಾಡಬಹುದಿತ್ತು. ಈ ನಿರ್ಣಯದಿಂದ ಮಾಧ್ಯಮಗಳಿಗೆ ಸಂದೇಶ ನೀಡಬಹುದೇ ಹೊರತು ಆಡಳಿತಾತ್ಮಕವಾಗಿ ಪ್ರಯೋಜನವಾಗುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ವಿಶೇಷ ಅಧಿವೇಶನ ಕರೆದು ಕೇಂದ್ರ ಸರ್ಕಾರದ ಯೋಜನೆಗೆ ಅಡ್ಡಗಾಲು ಹಾಕಲು ಪ್ರಯತ್ನ ಮಾಡಿದೆ. ವಿಬಿ ಜಿ ರಾಮ್ ಜಿ ಯೋಜನೆಯ ವಿರುದ್ಧ ನಿರ್ಣಯ ಕೈಗೊಂಡು ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಇದರಿಂದ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ ಎಂದರು.
ಉದ್ಯೋಗ ಖಾತರಿ ಯೋಜನೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ನಡೆದಿದೆ. ಇದು ಸಿಎಜಿ ವರದಿಯಲ್ಲೂ ಸಾಬೀತಾಗಿದೆ. ಹೊಸ ಯೋಜನೆಯಲ್ಲಿ ಪಾರದರ್ಶಕತೆ ಹೆಚ್ಚಿರುವುದರ ಜೊತೆಗೆ, ಕೇಂದ್ರ ಶೇ.60ರಷ್ಟು ಹಾಗೂ ರಾಜ್ಯ ಶೇ. 40ರಷ್ಟು ಅನುದಾನ ನೀಡುವ ವ್ಯವಸ್ಥೆ ತಂದು ಅನುದಾನವನ್ನು ಹೆಚ್ಚಿಸಲಾಗಿದೆ, ಇದನ್ನು ಸರ್ಕಾರ ಮನಗಾಣಬೇಕು ಎಂದು ಅವರು ಒತ್ತಾಯಿಸಿದರು.
ವಿಬಿ ರಾಮ್ ಜೀ ಯೋಜನೆ ಕುರಿತು ತಿಳಿಯಲು ಹಾಗೂ ಅರಿವು ಮೂಡಿಸಲು ಎಲ್ಲ ಶಾಸಕರು, ಮುಖಂಡರ ಜೊತೆ ಸಭೆ ನಡೆಯಲಿದೆ. ಈ ಬಗ್ಗೆ ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆಯಲಾಗಿದೆ. ಯೋಜನೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. ಹಾಗೆಯೇ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರೂ ಬರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಯೋಜನೆಯ ಬಗ್ಗೆ ವಿವರಿಸಲಾಗುತ್ತದೆ. ಅಧಿವೇಶನಕ್ಕೂ ಮೊದಲು ಕಾರ್ಯಕ್ರಮ ನಡೆಸಿ ಯೋಜನೆ ಬಗ್ಗೆ ಜನರಿಗೆ ತಿಳಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಮಾಹಿತಿ ನೀಡಿದರು.
ರಾಜ್ಯದಲ್ಲಿ ಆಡಳಿತ ಸರಿಯಾಗಿ ನಡೆಯುತ್ತಿಲ್ಲ. ಕಾನೂನು ಸುವ್ಯವಸ್ಥೆ ಕುಸಿದಿದ್ದು, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯಾವ ಇಲಾಖೆಯಲ್ಲೂ ಅನುದಾನ ಇಲ್ಲ. ದಿವಾಳಿ ಆಗಿರುವುದರಿಂದ ಯೋಜನೆಗೆ ಕೊಡಲು ಹಣ ಇಲ್ಲ. ಕೇಂದ್ರ ಸರ್ಕಾರವನ್ನು ತೆಗಳುವ ಭಾಷಣವನ್ನು ಓದಬಾರದು, ಈ ಕುರಿತು ಸರ್ಕಾರಕ್ಕೆ ಕಿವಿಮಾತು ಹೇಳಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡುತ್ತೇವೆ ಎಂದು.


