ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ತಮ್ಮ ಇತ್ತೀಚಿನ ಸೂಪರ್ ಹಿಟ್ ಸಿನಿಮಾ ‘ಧುರಂಧರ್’ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸಾಧನೆ ಮಾಡಿ ಮತ್ತೆ ಶಿಖರಕ್ಕೇರಿದ್ದಾರೆ. ಬಿಡುಗಡೆಯಾಗಿ ಎರಡು ತಿಂಗಳು ಕಳೆದರೂ ಚಿತ್ರವು ಉತ್ತಮ ಕಲೆಕ್ಷನ್ ಮುಂದುವರಿಸಿಕೊಂಡಿದ್ದು, ರಣವೀರ್ ಸಿಂಗ್ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದೆ. ಇದರ ಯಶಸ್ಸಿನ ಬೆನ್ನಲ್ಲೇ ‘ಧುರಂಧರ್’ ಎರಡನೇ ಭಾಗದ ಘೋಷಣೆಯೂ ಆಗಿದ್ದು, ಅದು ಮಾರ್ಚ್ 19ರಂದು ಬಿಡುಗಡೆಯಾಗಲಿದೆ.
ಈ ಭಾರಿ ಯಶಸ್ಸಿನ ಬಳಿಕ ರಣವೀರ್ ಸಿಂಗ್ ಸಂಪೂರ್ಣ ವಿಭಿನ್ನ ಜಾನರ್‌ಗೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಅವರು ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಸಿನಿರಂಗದಲ್ಲಿ ಕುತೂಹಲ ಮೂಡಿಸಿದೆ. ಈ ಚಿತ್ರ ವ್ಯಾಂಪೈರ್ ಕಥಾಹಂದರ ಹೊಂದಿರಲಿದೆ ಎನ್ನಲಾಗಿದ್ದು, ನಿರ್ದೇಶನದ ಹೊಣೆ ಹೊತ್ತಿರುವುದು ಖ್ಯಾತ ನಿರ್ದೇಶಕ ಪ್ರಿಯದರ್ಶನ್. ಚಿತ್ರದ ನಾಯಕಿಯಾಗಿ ಮಲಯಾಳಂನ ಹಿಟ್ ವ್ಯಾಂಪೈರ್ ಸಿನಿಮಾ ‘ಲೋಕಃ’ ಮೂಲಕ ಗಮನ ಸೆಳೆದ ಕಲ್ಯಾಣಿ ಪ್ರಿಯದರ್ಶನ್ ಕಾಣಿಸಿಕೊಳ್ಳಲಿದ್ದಾರೆ.
‘ಪ್ರಳಯ್’ ಎಂಬ ಶೀರ್ಷಿಕೆ ಹೊಂದಿರುವ ಈ ಹಾರರ್ ಚಿತ್ರದಲ್ಲಿ ಕಲ್ಯಾಣಿ ಮತ್ತೊಮ್ಮೆ ವ್ಯಾಂಪೈರ್ ಪಾತ್ರದಲ್ಲೇ ನಟಿಸಲಿದ್ದಾರೆ. ರಣವೀರ್ ಸಿಂಗ್ ಪಾಲಿಗೆ ಇದು ಸಂಪೂರ್ಣ ಹೊಸ ಅನುಭವವಾಗಲಿದೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಹಾರರ್ ಸಿನಿಮಾಗಳು ಯಶಸ್ಸು ಕಾಣುತ್ತಿರುವ ಹಿನ್ನೆಲೆಯಲ್ಲಿ ಈ ಆಯ್ಕೆ ಮಹತ್ವ ಪಡೆದುಕೊಂಡಿದೆ. ‘ಧುರಂಧರ್ 2’ ಚಿತ್ರೀಕರಣ ಮುಗಿದ ಬಳಿಕ ರಣವೀರ್ ಸಿಂಗ್ ‘ಪ್ರಳಯ್’ ಚಿತ್ರದ ಶೂಟಿಂಗ್ ಆರಂಭಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


