ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಸೈಟ್ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಪೊಲೀಸರು ನೀಡಿದ್ದ ‘ಕ್ಲೀನ್‌ಚಿಟ್’ ಸಿಂಧುತ್ವದ ಬಗ್ಗೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಂತಿಮ ತೀರ್ಪು ನೀಡಲಿದೆ.
ಲೋಕಾಯುಕ್ತ ಪೊಲೀಸರು ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿ ನ್ಯಾಯಾಲಯಕ್ಕೆ ‘ಬಿ-ರಿಪೋರ್ಟ್’ (ಅಂತಿಮ ವರದಿ) ಸಲ್ಲಿಸಿದ್ದರು. ಈ ವರದಿಯನ್ನು ತೀವ್ರವಾಗಿ ವಿರೋಧಿಸಿದ್ದ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ, ತನಿಖೆ ಸರಿಯಾಗಿ ನಡೆದಿಲ್ಲ ಎಂದು ಆಕ್ಷೇಪಣೆ ಎತ್ತಿ ಕೋರ್ಟ್ ಮೆಟ್ಟಿಲೇರಿದ್ದರು.
ಈ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ, “ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸಲು ಏಕೆ ವಿಳಂಬ ಮಾಡುತ್ತಿದ್ದಾರೆ?” ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಲೋಕಾಯುಕ್ತ ಅಭಿಯೋಜಕರು, “ವರದಿ ಸಿದ್ಧವಾಗಿದೆ, ಆದರೆ ತಾಂತ್ರಿಕ ಅನುಮತಿಗಳ ಕಾರಣ ವಿಳಂಬವಾಗುತ್ತಿದೆ. ಅಗತ್ಯವಿದ್ದರೆ ಸೀಲ್ಡ್ ಕವರ್‌ನಲ್ಲಿ ನೀಡಲು ಸಿದ್ಧ” ಎಂದು ತಿಳಿಸಿದ್ದರು.
ಒಂದು ವೇಳೆ ಬಿ-ರಿಪೋರ್ಟ್ ಅಂಗೀಕಾರವಾದರೆ, ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ದೊಡ್ಡ ಮಟ್ಟದ ಕಾನೂನು ರಿಲೀಫ್ ಸಿಗಲಿದೆ ಹಾಗೂ ಹಗರಣದ ಕಪ್ಪುಚುಕ್ಕೆಯಿಂದ ಅವರು ಮುಕ್ತರಾಗಲಿದ್ದಾರೆ.
ಒಂದು ವೇಳೆ ಬಿ-ರಿಪೋರ್ಟ್ ತಿರಸ್ಕೃತವಾದರೆ, ನ್ಯಾಯಾಲಯವು ಮರುತನಿಖೆಗೆ ಆದೇಶಿಸಬಹುದು ಅಥವಾ ದೂರುದಾರರ ಆಕ್ಷೇಪಣೆಯನ್ನು ಪುರಸ್ಕರಿಸಿ ತನಿಖಾಧಿಕಾರಿಗಳಿಗೆ ಚಾಟಿ ಬೀಸಬಹುದು. ಇದು ಸಿಎಂ ಪಾಲಿಗೆ ದೊಡ್ಡ ರಾಜಕೀಯ ಹಿನ್ನಡೆಯಾಗುವ ಸಾಧ್ಯತೆ ಇದೆ.


