ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಪಿನ್ ಮಾಂತ್ರಿಕ ಮುಜೀಬ್ ಉರ್ ರೆಹಮಾನ್ ಅವರ ಸ್ಫೋಟಕ ಹ್ಯಾಟ್ರಿಕ್ ಸಾಧನೆಯ ಬಲದಿಂದ ಅಫ್ಘಾನಿಸ್ತಾನ್ ತಂಡವು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ 39 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಅಫ್ಘಾನಿಸ್ತಾನ್ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಿಂದ ತನ್ನದಾಗಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡ ನಿಗದಿತ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 189 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಕೆರಿಬಿಯನ್ ಬೌಲರ್‌ಗಳನ್ನು ದಂಡಿಸಿದ ಅಫ್ಘಾನ್ ಬ್ಯಾಟರ್‌ಗಳು ಪಂದ್ಯದ ಮೇಲೆ ಆರಂಭಿಕ ಹಿಡಿತ ಸಾಧಿಸಿದರು.
190 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ಮುಜೀಬ್ ಉರ್ ರೆಹಮಾನ್ ಸಿಂಹಸ್ವಪ್ನವಾದರು. ಪಂದ್ಯದ 8ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದಿದ್ದ ಮುಜೀಬ್, ನಂತರ ಬೌಲಿಂಗ್‌ಗೆ ಮರಳಿದ್ದು 16ನೇ ಓವರ್‌ನಲ್ಲಿ. ಆದರೆ, ಆ ಓವರ್‌ನ ಮೊದಲ ಎಸೆತದಲ್ಲೇ ಕ್ವಿಂಟಿನ್ ಸ್ಯಾಪ್ಸನ್ ಅವರನ್ನು ಔಟ್ ಮಾಡುವ ಮೂಲಕ ‘ವಿಭಜಿತ ಹ್ಯಾಟ್ರಿಕ್’ ಸಾಧನೆ ಮಾಡಿದರು.
ಮುಜೀಬ್ ಸ್ಪಿನ್ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ 18.5 ಓವರ್‌ಗಳಲ್ಲಿ 150 ರನ್‌ಗಳಿಗೆ ಸರ್ವಪತನ ಕಂಡಿತು. ಈ ಗೆಲುವಿನ ಮೂಲಕ ಅಫ್ಘಾನಿಸ್ತಾನ್ ಸರಣಿಯನ್ನು ವಶಪಡಿಸಿಕೊಂಡು ಬೀಗಿದೆ.


