ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಆರ್ಥಿಕ ರಾಜಧಾನಿ ಎಂದು ಕರೆಯಲಾಗುವ ಕರಾಚಿಯ ಸದರ್ ಪ್ರದೇಶದಲ್ಲಿನ ಗುಲ್ ಪ್ಲಾಜಾ ಶಾಪಿಂಗ್ ಮಾಲ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 61ಕ್ಕೆ ಏರಿದೆ. ಪರಿಶೀಲನಾ ಕಾರ್ಯದ ವೇಳೆ ಒಂದೇ ಮಳಿಗೆಯಲ್ಲಿ 30ಕ್ಕೂ ಹೆಚ್ಚು ಶವಗಳು ಪತ್ತೆಯಾಗಿರುವುದರಿಂದ, ಮೃತರ ಸಂಖ್ಯೆ 100 ಮೀರಿರಬಹುದೆಂಬ ಆತಂಕವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಜ.17ರಂದು ಮಾಲ್‌ನ ನೆಲಮಾಳಿಗೆಯಲ್ಲಿ ಆರಂಭವಾದ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಕಟ್ಟಡಕ್ಕೆ ವ್ಯಾಪಿಸಿತ್ತು. ಸುಮಾರು 1,200 ಮಳಿಗೆಗಳನ್ನು ಹೊಂದಿರುವ ಈ ಬೃಹತ್ ಮಾಲ್‌ನಲ್ಲಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳಕ್ಕೆ 36 ಗಂಟೆಗಳ ಕಾಲ ಬೇಕಾಯಿತು. ಬೆಂಕಿ ಹರಡುತ್ತಿದ್ದಂತೆ ಹಲವು ಮಳಿಗೆಗಳ ಶಟ್ಟರ್‌ಗಳನ್ನು ಒಳಗಿದ್ದವರೇ ಮುಚ್ಚಿಕೊಂಡಿದ್ದು, ಇದರಿಂದ ಹೊರಬರಲು ಸಾಧ್ಯವಾಗದೆ ದಟ್ಟ ಹೊಗೆಯಲ್ಲಿ ಉಸಿರುಗಟ್ಟಿ ಸಾವು ಸಂಭವಿಸಿದೆ ಎನ್ನಲಾಗಿದೆ.
ಅಗ್ನಿ ನಂದಿಸಿದ ಬಳಿಕ ನಡೆದ ಶೋಧ ಕಾರ್ಯದಲ್ಲಿ ‘ದುಬೈ ಕ್ರಾಕರಿ’ ಎಂಬ ಮಳಿಗೆಯೊಳಗೆ ಹೆಚ್ಚಿನ ಶವಗಳು ಪತ್ತೆಯಾಗಿವೆ. 10ರಿಂದ 69 ವರ್ಷ ವಯಸ್ಸಿನ ಮಹಿಳೆಯರು, ಮಕ್ಕಳು ಮತ್ತು ಪುರುಷರು ಸೇರಿ 70ಕ್ಕೂ ಹೆಚ್ಚು ಮಂದಿ ಇನ್ನೂ ಕಾಣೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


