January22, 2026
Thursday, January 22, 2026
spot_img

ನಾಗೇಂದ್ರಗೆ ತಪ್ಪದ ‘ವಾಲ್ಮೀಕಿ’ ಸಂಕಷ್ಟ: ಜಾಮೀನು ರದ್ದತಿಗೆ ಹೈಕೋರ್ಟ್ ಮೆಟ್ಟಿಲೇರಿದ ಸಿಬಿಐ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಅಲ್ಪಕಾಲದ ನೆಮ್ಮದಿಯ ನಂತರ ಈಗ ಮತ್ತೆ ಕಾನೂನು ಸಂಘರ್ಷ ಎದುರಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ಕೇಂದ್ರ ತನಿಖಾ ದಳ ಈಗ ಹೈಕೋರ್ಟ್ ಮೊರೆ ಹೋಗಿದೆ.

ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನಾಗೇಂದ್ರ ಅವರಿಗೆ ಸಮನ್ಸ್ ನೀಡಿದ್ದರು. ಈ ವೇಳೆ ಬಂಧನದ ಭೀತಿ ಎದುರಿಸುತ್ತಿದ್ದ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದರು. ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯವು ಜನವರಿ 14ರಂದು ನಾಗೇಂದ್ರ ಅವರಿಗೆ ಜಾಮೀನು ಮಂಜೂರು ಮಾಡಿತ್ತು.

ವಿಶೇಷ ನ್ಯಾಯಾಲಯ ನೀಡಿದ ಈ ಆದೇಶವನ್ನು ಪ್ರಶ್ನಿಸಿರುವ ಸಿಬಿಐ, ಜಾಮೀನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಹಗರಣದ ಗಂಭೀರತೆ ಮತ್ತು ತನಿಖೆಯ ಹಿತದೃಷ್ಟಿಯಿಂದ ಜಾಮೀನು ರದ್ದತಿ ಅಗತ್ಯ ಎಂದು ಸಿಬಿಐ ವಾದಿಸಿದೆ.

ಈ ಮಹತ್ವದ ಅರ್ಜಿಯ ವಿಚಾರಣೆಯು ಇಂದು ಹೈಕೋರ್ಟ್ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ಪೀಠದಲ್ಲಿ ನಡೆಯಲಿದೆ. ಸಿಬಿಐ ಸಲ್ಲಿಸಿರುವ ಆಕ್ಷೇಪಣೆಗಳನ್ನು ನ್ಯಾಯಾಲಯ ಪುರಸ್ಕರಿಸುತ್ತದೆಯೇ ಅಥವಾ ನಾಗೇಂದ್ರ ಅವರ ಜಾಮೀನು ಮುಂದುವರಿಯುತ್ತದೆಯೇ ಎಂಬುದು ಇಂದಿನ ವಿಚಾರಣೆಯ ನಂತರ ತಿಳಿಯಲಿದೆ.

Must Read