ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾದಮಿಯ ಐತಿಹಾಸಿಕ ನೆಲದಲ್ಲಿ ಮತ್ತೆ ಮೊಳಗಲಿದೆ ಚಾಲುಕ್ಯರ ಶೌರ್ಯಗಾಥೆ. ಕನ್ನಡನಾಡಿನ ವೈಭವ, ಸಾಮ್ರಾಜ್ಯದ ಶಕ್ತಿ ಮತ್ತು ಇತಿಹಾಸದ ಗಂಭೀರತೆಯನ್ನು ಬೆಳ್ಳಿತೆರೆಗೆ ತರುವ ಮಹತ್ವದ ಘೋಷಣೆ ಒಂದನ್ನು ಬಾಗಲಕೋಟೆ ಜಿಲ್ಲೆ ಕಂಡಿದೆ. ಚಾಲುಕ್ಯ ಉತ್ಸವದ ಸಮಾರೋಪದಲ್ಲಿ ಪ್ರಕಟವಾದ ‘ಇಮ್ಮಡಿ ಪುಲಿಕೇಶಿ’ ಸಿನಿಮಾ ಘೋಷಣೆ, ಕನ್ನಡ ಸಿನಿರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಈ ಚಿತ್ರದಲ್ಲಿ ಇಮ್ಮಡಿ ಪುಲಿಕೇಶಿ ಪಾತ್ರಕ್ಕೆ ಜನಪ್ರಿಯ ನಟ ಡಾಲಿ ಧನಂಜಯ್ ಆಯ್ಕೆಯಾಗಿದ್ದು, ಈ ಘೋಷಣೆಯೊಂದಿಗೆ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿದೆ. ಕನ್ನಡ ಚಿತ್ರರಂಗದಲ್ಲಿ ಈ ಪಾತ್ರಕ್ಕೆ ವಿಶೇಷ ಸ್ಥಾನವಿದ್ದು, 1966ರಲ್ಲಿ ಇದೇ ಪಾತ್ರದಲ್ಲಿ ಡಾ. ರಾಜ್‌ಕುಮಾರ್ ಅವರು ಅಭಿನಯಿಸಿ ಇತಿಹಾಸ ಸೃಷ್ಟಿಸಿದ್ದರು. ಶಾಸಕ ವಿಜಯಾನಂದ ಕಾಶಪ್ಪನವರ್ ನೇತೃತ್ವದಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ಎಸ್‌ಆರ್‌ಕೆ ಪ್ರೋಡಕ್ಷನ್ ಅಡಿ ಇಮ್ಮಡಿ ಪುಲಕೇಶಿ ತೆರೆ ಮೇಲೆ ಬರಲಿದೆ.
ಚಿತ್ರ ನಿರ್ಮಾಣಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಸಹ ಕೈಜೋಡಿಸಲಿದ್ದು, ಬಾದಮಿಯ ಐತಿಹಾಸಿಕ ಹಿನ್ನೆಲೆಯನ್ನು ಅಚ್ಚುಕಟ್ಟಾಗಿ ತೆರೆ ಮೇಲೆ ತರಲು ತಂಡ ಸಿದ್ಧತೆ ನಡೆಸುತ್ತಿದೆ. ಕನ್ನಡ ಇತಿಹಾಸ, ಸಂಸ್ಕೃತಿ ಮತ್ತು ಶೌರ್ಯವನ್ನು ಹೊಸ ದೃಷ್ಟಿಕೋನದಲ್ಲಿ ತೋರಿಸಲು ಉದ್ದೇಶಿಸಿರುವ ‘ಇಮ್ಮಡಿ ಪುಲಿಕೇಶಿ’ ಸಿನಿಮಾ ಈಗಿನಿಂದಲೇ ಭಾರೀ ನಿರೀಕ್ಷೆ ಮೂಡಿಸಿದೆ.


