January22, 2026
Thursday, January 22, 2026
spot_img

ಒಂದೇ ಓವರ್‌ನಲ್ಲಿ ಬದಲಾದ ಪಂದ್ಯದ ಹಣೆಬರಹ: ಹೋಬಾರ್ಟ್ ಹರಿಕೇನ್ಸ್ ಗೆಲುವಿನ ನಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ನಡೆದ ನಾಕೌಟ್ ಪಂದ್ಯವು ಪ್ರೇಕ್ಷಕರ ಉಸಿರು ಬಿಗಿಹಿಡಿಯುವಂತೆ ಮಾಡಿತ್ತು. ಮಳೆಯ ಅಡಚಣೆಯ ನಡುವೆಯೂ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಹೋಬಾರ್ಟ್ ಹರಿಕೇನ್ಸ್ ತಂಡವು ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧ 3 ರನ್‌ಗಳ ರೋಚಕ ಜಯ ಸಾಧಿಸಿತು.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಮಾರ್ಕಸ್ ಸ್ಟೊಯಿನಿಸ್ ನಿರ್ಧಾರ ಆರಂಭದಲ್ಲಿ ಸರಿಯಾಗಿಯೇ ಇತ್ತು. ಹೋಬಾರ್ಟ್ ಹರಿಕೇನ್ಸ್ ತಂಡ 9 ಓವರ್‌ಗಳಲ್ಲಿ ಕೇವಲ 93 ರನ್ ಗಳಿಸಿತ್ತು. ಆದರೆ ಪಂದ್ಯದ ಚಿತ್ರಣ ಬದಲಾಗಿದ್ದು ಟಾಮ್ ಕರನ್ ಎಸೆದ 10ನೇ ಓವರ್‌ನಲ್ಲಿ. ಈ ಓವರ್‌ನಲ್ಲಿ ಅಬ್ಬರಿಸಿದ ಬ್ಯೂ ವೆಬ್‌ಸ್ಟರ್, ಮೂರು ಭರ್ಜರಿ ಸಿಕ್ಸರ್ ಸೇರಿದಂತೆ 21 ರನ್ ಚಚ್ಚಿದರು. ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಹರಿಕೇನ್ಸ್ ನಿಗದಿತ 10 ಓವರ್‌ಗಳಲ್ಲಿ 114 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.

ಮಳೆಯ ಕಾರಣ ಮೆಲ್ಬೋರ್ನ್ ಸ್ಟಾರ್ಸ್ ತಂಡಕ್ಕೆ 7 ಓವರ್‌ಗಳಲ್ಲಿ 85 ರನ್ ಗಳಿಸುವ ಪರಿಷ್ಕೃತ ಗುರಿಯನ್ನು ನೀಡಲಾಯಿತು. ಪ್ರತಿ ಓವರ್‌ಗೆ 12ಕ್ಕೂ ಹೆಚ್ಚು ರನ್ ಗಳಿಸಬೇಕಾದ ಒತ್ತಡದಲ್ಲಿದ್ದ ಸ್ಟಾರ್ಸ್, 6 ಓವರ್‌ ಮುಕ್ತಾಯಕ್ಕೆ 59 ರನ್ ಗಳಿಸಿತ್ತು.

ಗೆಲುವಿಗೆ ಕೊನೆಯ 6 ಎಸೆತಗಳಲ್ಲಿ 26 ರನ್‌ಗಳ ಅಗತ್ಯವಿತ್ತು. ಕಠಿಣ ಗುರಿಯನ್ನು ಬೆನ್ನಟ್ಟಿದ ಸ್ಟಾರ್ಸ್ ಬ್ಯಾಟರ್‌ಗಳು ಅಂತಿಮ ಓವರ್‌ನಲ್ಲಿ 22 ರನ್ ಕಲೆಹಾಕಿದರೂ, ಗುರಿ ತಲುಪಲು ಕೇವಲ 3 ರನ್‌ಗಳ ಅಂತರದಲ್ಲಿ ಎಡವಿದರು. ಅಂತಿಮವಾಗಿ ಹೋಬಾರ್ಟ್ ಹರಿಕೇನ್ಸ್ ಜಯದ ಸಂಭ್ರಮ ಆಚರಿಸಿತು.

ತಮ್ಮ ಬ್ಯಾಟಿಂಗ್ ಮೂಲಕ ಪಂದ್ಯಕ್ಕೆ ತಿರುವು ನೀಡಿದ ಬ್ಯೂ ವೆಬ್‌ಸ್ಟರ್ ಅರ್ಹವಾಗಿಯೇ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.

Must Read