January22, 2026
Thursday, January 22, 2026
spot_img

Relationship | ಪ್ರೀತಿ ಎಲ್ಲಿ ಜಾಸ್ತಿ ಇರುತ್ತೋ ಅಲ್ಲಿ ಜಗಳ ಆಗುತ್ತೆ ಅಂತಾರಲ್ಲ ಇದು ಎಷ್ಟು ಕರೆಕ್ಟ್?

“ಪ್ರೀತಿ ಎಲ್ಲಿ ಜಾಸ್ತಿ ಇರುತ್ತೋ ಅಲ್ಲಿ ಜಗಳ ಆಗುತ್ತೆ” ಅನ್ನೋ ಮಾತು ನಮ್ಮಲ್ಲಿ ತುಂಬಾ ಸಾಮಾನ್ಯ. ಜಗಳ ಆದ್ರೆ ಮಾತ್ರ ಪ್ರೀತಿ ಇದೆ ಅಂತಲೂ ಕೆಲವರು ಸಮಾಧಾನ ಪಡ್ಕೊಳ್ತಾರೆ. ಆದರೆ ಈ ಮಾತು ನಿಜವಾಗಿಯೂ ಎಷ್ಟು ಸರಿಯಾಗಿದೆ? ಪ್ರೀತಿ ಇದ್ದರೆ ಜಗಳ ಅನಿವಾರ್ಯವೇ? ಇಲ್ಲಾ ಜಗಳವೇ ಪ್ರೀತಿ ತೋರ್ಪಡಿಸಿಕೊಳ್ಳುವ ರೀತಿಯಾ? ಅನ್ನೋ ಪ್ರಶ್ನೆ ಬಹುತೇಕ ಎಲ್ಲರ ಜೀವನದಲ್ಲೂ ಒಮ್ಮೆ ತಲೆ ಎತ್ತೇ ಎತ್ತುತ್ತದೆ.

ನಿಜ ಹೇಳ್ಬೇಕಂದ್ರೆ, ಪ್ರೀತಿ ಜಾಸ್ತಿ ಇದ್ದರೆ ಜಗಳ ಆಗೋದು ಸಹಜ. ಕಾರಣ, ಪ್ರೀತಿಯ ಜೊತೆ ನಿರೀಕ್ಷೆಗಳು ಬರುತ್ತವೆ. “ಅವನು ಹೀಗೆ ಮಾಡ್ಬೇಕು”, “ಅವಳು ನನ್ನನ್ನು ಅರ್ಥ ಮಾಡ್ಕೊಳ್ಳಬೇಕು” ಅನ್ನೋ ಭಾವನೆಗಳು ಜಾಸ್ತಿಯಾಗುತ್ತವೆ. ಈ ನಿರೀಕ್ಷೆಗಳು ಪೂರೈಸದಾಗ ಬೇಸರ, ಕೋಪ, ಜಗಳ ರೂಪಕ್ಕೆ ಬರುತ್ತದೆ. ಅಪರಿಚಿತರ ಜೊತೆ ನಾವು ಅಷ್ಟು ಜಗಳ ಮಾಡಲ್ಲ, ಆದರೆ ನಮ್ಮವರ ಜೊತೆ ಮಾತ್ರ ಜಾಸ್ತಿ ವಾಗ್ವಾದ ಆಗೋದು ಇದೇ ಕಾರಣಕ್ಕೆ.

ಆದ್ರೆ ಇಲ್ಲಿ ಗಮನಿಸಬೇಕಾದ ಮಹತ್ವದ ವಿಷಯ ಏನೆಂದರೆ ಜಗಳ ಆಗೋದು ಪ್ರೀತಿಯ ಸೂಚಕ ಅಲ್ಲ, ಜಗಳವನ್ನು ಹೇಗೆ ನಿಭಾಯಿಸುತ್ತೇವೆ ಅನ್ನೋದು ಪ್ರೀತಿಯ ನಿಜವಾದ ಅಳತೆ. ಪರಸ್ಪರ ಗೌರವ ಕಾಪಾಡಿಕೊಂಡು ಮಾತನಾಡುವ ಜಗಳ ಸಂಬಂಧವನ್ನು ಗಟ್ಟಿ ಮಾಡುತ್ತೆ. ಆದರೆ ಪದೇಪದೇ ಅವಮಾನ, ಮೌನ ಯುದ್ಧ, ಅಥವಾ ಕೋಪದ ಮಿತಿ ಮೀರಿ ಹೋಗೋದು ಪ್ರೀತಿಯನ್ನು ನಿಧಾನವಾಗಿ ಕೊಂದುಹಾಕುತ್ತೆ.

ಪ್ರೀತಿ ಅಂದ್ರೆ ಜಗಳ ಇಲ್ಲದೇ ಇರಬೇಕು ಅನ್ನೋದೇ ತಪ್ಪು ಕಲ್ಪನೆ. ಜಗಳ ಬರೋದು ಸಹಜ, ಆದರೆ ಅದಕ್ಕೆ ಅಂತಿಮ ಗುರಿ ಹೊಂದಾಣಿಕೆ ಆಗಬೇಕು. ಅಲ್ಲಿ ಕೇಳುವ ಮನಸ್ಸು, ಒಪ್ಪಿಕೊಳ್ಳುವ ಧೈರ್ಯ ಮತ್ತು ಬಿಟ್ಟು ಕೊಡುವ ಮನೋಭಾವ ಇದ್ದರೆ, ಜಗಳವೂ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.

ಹೀಗಾಗಿ, “ಪ್ರೀತಿ ಜಾಸ್ತಿ ಅಂದರೆ ಜಗಳ ಜಾಸ್ತಿ” ಅನ್ನೋ ಮಾತು ಅರ್ಧ ಸತ್ಯ. ಪೂರ್ಣ ಸತ್ಯ ಏನೆಂದರೆ ಪ್ರೀತಿ ಜಾಸ್ತಿ ಇದ್ದರೆ ಅರ್ಥಮಾಡಿಕೊಳ್ಳುವ ಪ್ರಯತ್ನವೂ ಜಾಸ್ತಿ ಇರಬೇಕು. ಅಲ್ಲಿ ಜಗಳವೂ ಇರುತ್ತೆ, ಜೊತೆಗೆ ಸಂಬಂಧ ಉಳಿಸುವ ಜಾಣ್ಮೆಯೂ ಇರಬೇಕು.

Must Read