ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾಗಳಲ್ಲಿ ಅಥವಾ ಕಾದಂಬರಿಗಳಲ್ಲಿ ಮಾತ್ರ ಕಾಣುವ ನಿಷ್ಠೆಯ ಕಥೆಯೊಂದು, ಮಧ್ಯಪ್ರದೇಶದ ಶಿವಪುರಿಯಲ್ಲಿ ನಿಜ ಜೀವನದಲ್ಲೇ ಸದ್ದಿಲ್ಲದೆ ನಡೆದಿದೆ. ಮಾಲೀಕರ ಅಕಾಲಿಕ ನಿಧನದ ಬಳಿಕ, ಅವರ ಸಾಕು ನಾಯಿ ರಾತ್ರಿ ಪೂರ್ತಿ ಶವದ ಪಕ್ಕದಲ್ಲೇ ಕುಳಿತುಕೊಂಡು ಕಾವಲು ಕಾಯ್ದ ಘಟನೆ, ಜಪಾನ್‌ನ ಪ್ರಸಿದ್ಧ ಹಚಿಕೋ ಕಥೆಯನ್ನು ಮತ್ತೆ ನೆನಪಿಸಿದೆ.
ಶಿವಪುರಿ ಜಿಲ್ಲೆಯ ಕರೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಬಡೋರಾ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಸ್ಥಳೀಯ ವ್ಯಕ್ತಿಯೊಬ್ಬರು ಅಕಸ್ಮಾತ್ತಾಗಿ ಮೃತಪಟ್ಟ ನಂತರ, ಅವರ ಶವವನ್ನು ಮನೆಯಲ್ಲೇ ಇಡಲಾಗಿತ್ತು. ಆ ವೇಳೆ, ಅವರ ಸಾಕು ನಾಯಿ ಒಂದು ಕ್ಷಣವೂ ಅಲ್ಲಿಂದ ಸರಿಯದೇ, ಇಡೀ ರಾತ್ರಿ ಮಾಲೀಕರ ಪಕ್ಕದಲ್ಲೇ ಕುಳಿತುಕೊಂಡಿತ್ತು. ಸಂಬಂಧಿಕರು ನಾಯಿ ಬಳಿ ಹೋಗಿ ಸಮಾಧಾನಪಡಿಸಲು ಪ್ರಯತ್ನಿಸಿದರೂ, ಅದು ತನ್ನ ಗೆಳೆಯನನ್ನು ಬಿಟ್ಟು ಹೋಗಲು ಸಿದ್ಧವಾಗಿರಲಿಲ್ಲ.
ಮರುದಿನ ಬೆಳಗ್ಗೆ ಶವವನ್ನು ಪೋಸ್ಟ್‌ಮಾರ್ಟಂಗೆ ಟ್ರ್ಯಾಕ್ಟರ್-ಟ್ರಾಲಿಯಲ್ಲಿ ಕೊಂಡೊಯ್ಯುವಾಗ, ಆ ನಾಯಿ ಸುಮಾರು 4 ಕಿಲೋಮೀಟರ್ ದೂರವರೆಗೆ ವಾಹನದ ಹಿಂದೆ ಓಡಿಕೊಂಡು ಹೋಗಿದೆ. ಪೋಸ್ಟ್‌ಮಾರ್ಟಂ ಕೇಂದ್ರ ತಲುಪಿದ ಬಳಿಕವೂ, ಅದು ಅಲ್ಲಿಯೇ ಕಾಯುತ್ತಾ ಕುಳಿತಿತ್ತು.
ಕೊನೆಗೆ ಅಂತ್ಯಕ್ರಿಯೆಯ ವೇಳೆ ಕೂಡ ನಾಯಿ ಶವಯಾತ್ರೆಯೊಂದಿಗೆ ಸಾಗಿದ್ದು, ಮಾಲೀಕರ ಅಂತಿಮ ಸಂಸ್ಕಾರ ಮುಗಿಯುವವರೆಗೂ ಅಲ್ಲೇ ಉಳಿದಿದೆ. ನಾಯಿ ಶವದ ಪಕ್ಕ ಕುಳಿತುಕೊಂಡಿರುವ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಈ ನಿಷ್ಠೆಯನ್ನು ಹಚಿಕೋ ಕಥೆಯೊಂದಿಗೆ ಹೋಲಿಸಿದ್ದಾರೆ. ಮೌನದಲ್ಲೇ ವ್ಯಕ್ತವಾದ ಈ ಪ್ರೀತಿ, ಪ್ರಾಣಿಗಳ ನಿಸ್ವಾರ್ಥ ಸ್ನೇಹದ ಮತ್ತೊಂದು ಜೀವಂತ ಸಾಕ್ಷಿಯಾಗಿದೆ.


