ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ಅಹಮದಾಬಾದ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿ ಗುಜರಾತ್ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸಂಸದ ಶಕ್ತಿಸಿನ್ಹ ಗೋಹಿಲ್ ಅವರ ಸೋದರಳಿಯ ಯಶ್‌ರಾಜ್ ಗೋಹಿಲ್ ಎಂದು ಗುರುತಿಸಲಾಗಿದೆ.
ಪೊಲೀಸ್ ಮಾಹಿತಿ ಪ್ರಕಾರ, ಯಶ್‌ರಾಜ್ ತನ್ನ ಪತ್ನಿ ರಾಜೇಶ್ವರಿ ಜಡೇಜಾ (30) ಅವರನ್ನು ಮನೆಯಲ್ಲಿ ಇಡಲಾಗಿದ್ದ ಪರವಾನಗಿ ಪಡೆದ ಬಂದೂಕಿನಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪತ್ನಿ ಸಾವನ್ನಪ್ಪಿದ ಕೆಲವೇ ಸಮಯದ ಬಳಿಕ, ಅದೇ ಬಂದೂಕಿನಿಂದ ಯಶ್‌ರಾಜ್ ತನ್ನ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತಃ ಭಾವನಗರದವರಾದ ಈ ದಂಪತಿ, ಇಬ್ಬರಿಗೂ ಇದು ಎರಡನೇ ವಿವಾಹವಾಗಿದ್ದು, ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಮದುವೆಯ ನಂತರ ಅಹಮದಾಬಾದ್‌ನಲ್ಲಿ ನೆಲೆಸಿದ್ದರು. ಮಂಗಳವಾರ ರಾತ್ರಿ ಊಟ ಮುಗಿಸಿ ಮನೆಗೆ ಬಂದ ನಂತರ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಧಾವಿಸಿದ ತುರ್ತು ವೈದ್ಯಕೀಯ ಸಿಬ್ಬಂದಿ, ರಾಜೇಶ್ವರಿ ಸ್ಥಳದಲ್ಲೇ ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ. ನಂತರ ಯಶ್‌ರಾಜ್ ಕೂಡ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂದೂಕು ಮನೆಯಲ್ಲಿ ಹೇಗೆ ಬಂತು, ದಂಪತಿ ನಡುವೆ ಏನಾದರೂ ವೈಮನಸ್ಸು ಇದ್ದಿತ್ತೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


