ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಹಿಂದೂ ಮಹಾಸಾಗರದಲ್ಲಿರುವ ತಂತ್ರಜ್ಞಾನದ ದೃಷ್ಟಿಯಿಂದ ಮಹತ್ವದ ಡಿಯಾಗೋ ಗಾರ್ಸಿಯಾ ದ್ವೀಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ದ್ವೀಪವನ್ನು ಬ್ರಿಟನ್ ಸರ್ಕಾರ ಮಾರಿಷಸ್‌ಗೆ ಹಿಂತಿರುಗಿಸಲು ಮುಂದಾಗಿರುವುದು ಟ್ರಂಪ್ ಆಕ್ಷೇಪಕ್ಕೆ ಕಾರಣವಾಗಿದೆ.
ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶ ಹಾಗೂ ಹಳೆಯ ಒಪ್ಪಂದದ ಹಿನ್ನೆಲೆಯಲ್ಲಿ ಡಿಯಾಗೋ ಗಾರ್ಸಿಯಾವನ್ನು ಮಾರಿಷಸ್‌ಗೆ ಒಪ್ಪಿಸುವ ನಿರ್ಧಾರವನ್ನು ಬ್ರಿಟನ್ ತೆಗೆದುಕೊಂಡಿದೆ. ಆದರೆ ಇದೇ ದ್ವೀಪದಲ್ಲಿ ಅಮೆರಿಕದ ಪ್ರಮುಖ ಸೇನಾ ನೆಲೆ ಇರುವುದರಿಂದ, ಈ ನಿರ್ಧಾರವನ್ನು ಟ್ರಂಪ್ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ತಪ್ಪು ಹೆಜ್ಜೆ ಎಂದು ಕರೆದಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಅವರು, ಇಂತಹ ಕ್ರಮವನ್ನು ಚೀನಾ ಮತ್ತು ರಷ್ಯಾ ದೌರ್ಬಲ್ಯವಾಗಿ ನೋಡುತ್ತಿವೆ ಎಂದು ಆರೋಪಿಸಿದ್ದಾರೆ.
ಡಿಯಾಗೋ ಗಾರ್ಸಿಯಾ ವಿಚಾರದಲ್ಲಿ ಅಮೆರಿಕ ಹಕ್ಕು ಸಾಧನೆಗೆ ಮುಂದಾದರೆ, ಗ್ರೀನ್‌ಲ್ಯಾಂಡ್ ಪ್ರಕರಣದಂತೆ ಈ ಬಾರಿ ಭಾರತ ಮತ್ತು ಚೀನಾದ ವಿರೋಧವೂ ಎದುರಾಗುವ ಸಾಧ್ಯತೆ ಇದೆ. ಭಾರತ ಈಗಾಗಲೇ ಬ್ರಿಟನ್ ದ್ವೀಪವನ್ನು ಮಾರಿಷಸ್‌ಗೆ ಹಿಂತಿರುಗಿಸುವುದನ್ನು ಬೆಂಬಲಿಸುತ್ತಿದ್ದು, ಹಿಂದೂ ಮಹಾಸಾಗರದಲ್ಲಿ ವಿದೇಶಿ ಸೇನಾ ಹಾಜರಾತಿ ಕಡಿಮೆಯಾಗಬೇಕು ಎಂಬ ನಿಲುವು ಹೊಂದಿದೆ.


