ಹೊಸದಿಗಂತ ಡಿಜಿಟಲ್ ಡೆಸ್ಕ್:
77ನೇ ಗಣರಾಜೋತ್ಸವದ ಹಿನ್ನೆಲೆಯಲ್ಲಿ ಜನವರಿ 26ರಂದು ನಡೆಯಲಿರುವ ಪರೇಡ್‌ಗೆ ಮುನ್ನ ದೆಹಲಿ ಪೊಲೀಸರು ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಏರಿಸಿದ್ದಾರೆ. ಈ ಬಾರಿ ಭದ್ರತಾ ವ್ಯವಸ್ಥೆಯಲ್ಲಿ ಎಐ ಸ್ಮಾರ್ಟ್ ಕನ್ನಡಕಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ.
ಗಣರಾಜೋತ್ಸವಕ್ಕೆ ಯಾವುದೇ ಭಯೋತ್ಪಾದಕ ಬೆದರಿಕೆ ಎದುರಾಗದಂತೆ ತಡೆಯುವ ಉದ್ದೇಶದಿಂದ, ದೆಹಲಿ ಪೊಲೀಸ್ ಇಲಾಖೆ ಬಹುಸ್ತರದ ಭದ್ರತಾ ವಲಯ ಜಾರಿಗೊಳಿಸಿದೆ. ಈ ನಡುವೆ ಮೊದಲ ಬಾರಿಗೆ ಬಿಡುಗಡೆ ಮಾಡಿರುವ ಅಲರ್ಟ್ ಪೋಸ್ಟರ್‌ಗಳಲ್ಲಿ ದೆಹಲಿಯ ಸ್ಥಳೀಯ ಭಯೋತ್ಪಾದಕನ ಚಿತ್ರವನ್ನು ಸೇರಿಸಲಾಗಿದೆ. ಮೊಹಮ್ಮದ್ ರೆಹಾನ್ ಎಂಬಾತ ಅಲ್-ಖೈದಾ ಇನ್ ಇಂಡಿಯನ್ ಸಬ್‌ಕಾಂಟಿನೆಂಟ್ ಸಂಘಟನೆಗೆ ಸಂಬಂಧ ಹೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಭದ್ರತಾ ಕ್ರಮಗಳ ಪ್ರಮುಖ ಆಕರ್ಷಣೆಯಾಗಿ ಎಐ ಸ್ಮಾರ್ಟ್ ಕನ್ನಡಕಗಳನ್ನು ಪೊಲೀಸರಿಗೆ ಒದಗಿಸಲಾಗಿದೆ. ಈ ಕನ್ನಡಕಗಳ ಮೂಲಕ ಅಪರಾಧ ಹಿನ್ನೆಲೆಯ ವ್ಯಕ್ತಿಗಳು, ಶಂಕಿತರು ಹಾಗೂ ಕಳ್ಳತನಗೊಂಡ ವಾಹನಗಳು ಕಂಡುಬಂದ ಕ್ಷಣದಲ್ಲೇ ಪೊಲೀಸರಿಗೆ ತಕ್ಷಣ ಅಲರ್ಟ್ ಸಿಗಲಿದೆ. ಇದರ ಜೊತೆಗೆ ಹೈ-ರೆಸಲ್ಯೂಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಫೇಶಿಯಲ್ ರಿಕಗ್ನಿಷನ್ ತಂತ್ರಜ್ಞಾನಕ್ಕೆ ಸಂಪರ್ಕಿಸಲಾಗಿದೆ.
ಕರ್ತವ್ಯ ಪಥ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು 10,000ಕ್ಕೂ ಹೆಚ್ಚು ಪೊಲೀಸ್ ಹಾಗೂ ಅರೆಸೈನಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಡ್ರೋನ್ ವಿರೋಧಿ ಘಟಕಗಳು, ಸ್ನೈಪರ್ ತಂಡಗಳು ಮತ್ತು ಕಠಿಣ ತಪಾಸಣಾ ಕ್ರಮಗಳು ಜಾರಿಯಲ್ಲಿರಲಿವೆ.


