ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜ್‌ಶಾಲಾ ಸಂಕೀರ್ಣಕ್ಕೆ ಸಂಬಂಧಿಸಿದ ಬಹುಕಾಲದ ವಿವಾದದ ನಡುವೆ, ಬಸಂತ ಪಂಚಮಿಯ ದಿನ ಪ್ರಾರ್ಥನೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಶುಕ್ರವಾರಕ್ಕೆ ಬಸಂತ ಪಂಚಮಿ ಬಂದಿರುವ ಹಿನ್ನೆಲೆ ಉಂಟಾದ ಗೊಂದಲ ನಿವಾರಿಸಲು ಕೋರ್ಟ್ ಮಧ್ಯಸ್ಥಿಕೆ ವಹಿಸಿದ್ದು, ಎರಡೂ ಸಮುದಾಯಗಳಿಗೆ ಸಮಯ ನಿಗದಿ ಮಾಡಿ ಅನುಮತಿ ನೀಡಿದೆ.
ಕೋರ್ಟ್ ಆದೇಶದಂತೆ, ಹಿಂದು ಸಮುದಾಯಕ್ಕೆ ಬಸಂತ ಪಂಚಮಿಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಭೋಜ್‌ಶಾಲಾ ಆವರಣದಲ್ಲಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದೇ ವೇಳೆ, ಮುಸ್ಲಿಂ ಸಮುದಾಯಕ್ಕೆ ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ನಮಾಜ್ ಸಲ್ಲಿಸುವ ಹಕ್ಕನ್ನು ನೀಡಲಾಗಿದೆ.
11ನೇ ಶತಮಾನಕ್ಕೆ ಸೇರಿದ ಈ ಸ್ಮಾರಕವನ್ನು ಹಿಂದುಗಳು ದೇವಿ ಸರಸ್ವತಿಯ ದೇವಸ್ಥಾನವೆಂದು ನಂಬಿಕೆ ಇಟ್ಟಿದ್ದರೆ, ಮುಸ್ಲಿಮರು ಕಮಲ್ ಮೌಲಾ ಮಸೀದ್ ಎಂದು ಪರಿಗಣಿಸುತ್ತಿದ್ದಾರೆ. ಸಾಮಾನ್ಯವಾಗಿ ಮಂಗಳವಾರ ಹಾಗೂ ಬಸಂತ ಪಂಚಮಿಯಂದು ಹಿಂದು ಪೂಜೆ, ಶುಕ್ರವಾರ ಮಧ್ಯಾಹ್ನ ಮುಸ್ಲಿಂ ನಮಾಜ್ ಪದ್ಧತಿ ಅನುಸರಿಸಲಾಗುತ್ತಿದೆ.
ಈ ವರ್ಷ ಎರಡೂ ದಿನಗಳು ಒಂದೇ ದಿನ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯದ ಸ್ಪಷ್ಟ ಆದೇಶ ಅಗತ್ಯವಾಗಿದೆ. ಜೊತೆಗೆ, ನಮಾಜ್‌ಗೆ ಆಗಮಿಸುವವರ ಸಂಖ್ಯೆಯನ್ನು ಮುಂಚಿತವಾಗಿ ಆಡಳಿತಕ್ಕೆ ತಿಳಿಸಬೇಕೆಂದು ಸೂಚನೆ ನೀಡಲಾಗಿದೆ.


