ಹೊಸದಿಗಂತ ಹೊಳೆನರಸೀಪುರ:
ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಶುರುವಾದ ಜಗಳವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲ್ಲೂಕಿನ ಕಬ್ಬೂರು ಗ್ರಾಮದಲ್ಲಿ ವರದಿಯಾಗಿದೆ. ಗ್ರಾಮದ ಗಣೇಶ (46) ಎಂಬುವವರೇ ಸ್ನೇಹಿತರಿಂದಲೇ ಹತ್ಯೆಗೀಡಾದ ದುರ್ದೈವಿ.
ಮಂಗಳವಾರ ರಾತ್ರಿ ಮೃತ ಗಣೇಶ ಹಾಗೂ ಆತನ ಸ್ನೇಹಿತರಾದ ಸುಧೀರ್ ಮತ್ತು ಅಶೋಕ್ ಕಾಡುಹಂದಿಗಳ ಹಾವಳಿಯಿಂದ ಬೆಳೆ ರಕ್ಷಿಸಲು ಜಮೀನಿಗೆ ತೆರಳಿದ್ದರು. ಈ ವೇಳೆ ಮೂವರೂ ಸೇರಿ ಜಮೀನಿನಲ್ಲೇ ಮದ್ಯ ಸೇವಿಸಿದ್ದಾರೆ. ನಶೆ ಏರುತ್ತಿದ್ದಂತೆ ಇವರ ನಡುವೆ ಸಣ್ಣ ವಿಷಯಕ್ಕೆ ಮಾತಿನ ಚಕಮಕಿ ಆರಂಭವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಸುಧೀರ್ ಮತ್ತು ಅಶೋಕ್, ಕುಡುಗೋಲಿನಿಂದ ಗಣೇಶನ ಕುತ್ತಿಗೆ ಕುಯ್ದು ಸ್ಥಳದಲ್ಲೇ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆಯಾದ ಬಳಿಕ ರಾತ್ರಿಯಿಡೀ ಶವ ಜಮೀನಿನಲ್ಲೇ ಬಿದ್ದಿದ್ದರಿಂದ, ರಕ್ತದ ವಾಸನೆಗೆ ಬಂದ ಚಿರತೆ ಅಥವಾ ಮುಂಗುಸಿಗಳು ಮೃತದೇಹದ ತಲೆ ಮತ್ತು ಕುತ್ತಿಗೆಯ ಭಾಗವನ್ನು ಕಚ್ಚಿ ತಿಂದಿರುವುದು ಸ್ಥಳದಲ್ಲಿ ಕಂಡುಬಂದಿದೆ. ಬುಧವಾರ ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿಗೆ ತೆರಳಿದ್ದಾಗ ಈ ಭೀಕರ ದೃಶ್ಯ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿದ ಹಳ್ಳಿಮೈಸೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.


