January22, 2026
Thursday, January 22, 2026
spot_img

IPL 2026 | BCCI ಹೊಸ ನಿರ್ಧಾರ: ಹೋಮ್ ಗ್ರೌಂಡ್ ಚೇಂಜ್ ಮಾಡ್ಕೊಂಡ ರಾಜಸ್ಥಾನ್ ರಾಯಲ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್–19ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಅಭಿಮಾನಿಗಳಿಗೆ ಹೊಸ ಅನುಭವ ನೀಡಲು ಸಜ್ಜಾಗಿದೆ. ಈ ಬಾರಿ ತಂಡ ತನ್ನ ಸಾಂಪ್ರದಾಯಿಕ ತವರು ಮೈದಾನವಾದ ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಕಣಕ್ಕಿಳಿಯುವುದಿಲ್ಲ. ರಾಜಸ್ಥಾನ ಕ್ರಿಕೆಟ್ ಸಂಘದ ಆಡಳಿತ ಸಂಬಂಧಿತ ಸಮಸ್ಯೆಗಳ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಚುನಾವಣೆ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಜೈಪುರ ಮೈದಾನದಲ್ಲಿ ಪಂದ್ಯ ಆಯೋಜನೆಗೆ ಹಸಿರು ನಿಶಾನೆ ಸಿಗದಿರುವ ಕಾರಣ, ಆರ್‌ಆರ್ ಬದಲಿ ತವರು ಮೈದಾನಗಳನ್ನು ಆಯ್ಕೆ ಮಾಡಿಕೊಂಡಿದೆ. ಮುಂದಿನ ಸೀಸನ್‌ನಲ್ಲಿ ತಂಡ ಎರಡು ರಾಜ್ಯಗಳಲ್ಲಿ ಹೋಮ್ ಮ್ಯಾಚ್‌ಗಳನ್ನು ಆಡಲಿದೆ.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧೀನದಲ್ಲಿರುವ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಾಲ್ಕರಿಂದ ಐದು ಪಂದ್ಯಗಳನ್ನು ಆಡಲು ಯೋಜನೆ ರೂಪಿಸಲಾಗಿದೆ. ಉಳಿದ ಹೋಮ್ ಪಂದ್ಯಗಳು ಅಸ್ಸಾಂನ ಗುವಾಹಟಿಯ ಬರ್ಸಾಪರ ಸ್ಟೇಡಿಯಂನಲ್ಲಿ ನಡೆಯಲಿವೆ. ಈಗಾಗಲೇ ಬರ್ಸಾಪರವನ್ನು ದ್ವಿತೀಯ ತವರು ಮೈದಾನವಾಗಿ ಬಳಸುತ್ತಿರುವ ಆರ್‌ಆರ್, ಈ ಬಾರಿ ಕೂಡ ಅಲ್ಲಿ ಎರಡು ಪಂದ್ಯಗಳನ್ನು ಆಡಲಿದೆ.

ಇನ್ನು ತಂಡದ ನಾಯಕತ್ವದಲ್ಲೂ ಬದಲಾವಣೆ ಖಚಿತವಾಗಿದೆ. ಕಳೆದ ಸೀಸನ್ ನಾಯಕನಾಗಿದ್ದ ಸಂಜು ಸ್ಯಾಮ್ಸನ್ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಸೇರಿರುವ ಹಿನ್ನೆಲೆಯಲ್ಲಿ, ರಾಜಸ್ಥಾನ್ ರಾಯಲ್ಸ್ ಹೊಸ ನಾಯಕನನ್ನು ಘೋಷಿಸುವ ನಿರೀಕ್ಷೆಯಿದೆ. ಹೊಸ ಮೈದಾನ, ಹೊಸ ನಾಯಕ ಈ ಬಾರಿ ಆರ್‌ಆರ್ ಪಯಣ ಕುತೂಹಲ ಮೂಡಿಸಿದೆ.

Must Read