January22, 2026
Thursday, January 22, 2026
spot_img

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ‘ಧುರಂಧರ್’ ಈಗ ಒಟಿಟಿಗೆ ಲಗ್ಗೆ: ನೆಟ್‌ಫ್ಲಿಕ್ಸ್ ರಿಲೀಸ್ ಡೇಟ್ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಕ್ಸ್ ಆಫೀಸ್‌ನಲ್ಲಿ ಸತತ ಒಂದೂವರೆ ತಿಂಗಳಿನಿಂದ ನಾಗಾಲೋಟ ಮುಂದುವರಿಸಿರುವ ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಈಗ ಡಿಜಿಟಲ್ ಪರದೆಯ ಮೇಲೆ ಅಬ್ಬರಿಸಲು ಸಿದ್ಧವಾಗಿದೆ. ಆರಂಭದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರೂ, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದ ಈ ಚಿತ್ರ ಈಗ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ.

ಡಿಸೆಂಬರ್ 5ರಂದು ತೆರೆಕಂಡಿದ್ದ ಈ ಚಿತ್ರವು ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡಿದ ಕಾರಣ, ಒಟಿಟಿ ಬಿಡುಗಡೆಯನ್ನು ಮುಂದೂಡಲಾಗಿತ್ತು. ಈ ಮೊದಲು ಸಿನಿಮಾ ರಿಲೀಸ್ ಆದ 30 ದಿನಕ್ಕೇ ಒಟಿಟಿಗೆ ತರುವ ಯೋಜನೆಯಿತ್ತು, ಆದರೆ ಥಿಯೇಟರ್‌ಗಳಲ್ಲಿ ಸಿನಿಮಾದ ಭರ್ಜರಿ ಓಟದಿಂದಾಗಿ ಈಗ ಜನವರಿ 30ರಂದು ಅಂತಿಮವಾಗಿ ಸ್ಟ್ರೀಮಿಂಗ್‌ಗೆ ಲಭ್ಯವಾಗಲಿದೆ.

ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಸ್ಪೈ (ಗೂಢಚಾರಿ) ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಕ್ಷಯ್ ಖನ್ನಾ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ರಿಲೀಸ್ ಆಗಿದ್ದರೂ, ವಿಶ್ವಾದ್ಯಂತ ಬರೋಬ್ಬರಿ 1300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ.

ಈಗಾಗಲೇ ಚಿತ್ರತಂಡ ಸೀಕ್ವೆಲ್ ಘೋಷಣೆ ಮಾಡಿದ್ದು, ಮಾರ್ಚ್ 19ರಂದು ‘ಧುರಂಧರ್ 2’ ತೆರೆಗೆ ಬರಲಿದೆ. ಎರಡನೇ ಭಾಗ ಬಿಡುಗಡೆಯಾಗುವ ಮುನ್ನ ಮೊದಲ ಭಾಗವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಒಟಿಟಿ ರಿಲೀಸ್ ಮಹತ್ವ ಪಡೆದುಕೊಂಡಿದೆ. ಥಿಯೇಟರ್‌ನಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಈಗ ಮನೆಯಲ್ಲೇ ಕುಳಿತು ‘ಧುರಂಧರ್’ ಸಾಹಸವನ್ನು ಆನಂದಿಸಬಹುದಾಗಿದೆ.

Must Read