January22, 2026
Thursday, January 22, 2026
spot_img

ಸ್ವಾಮೀಜಿಗೆ ಬ್ಲ್ಯಾಕ್​ಮೇಲ್, ಲಕ್ಷಾಂತರ ರೂ. ವಸೂಲಿ: ಚಿಕ್ಕಮಗಳೂರಿನ ಮಹಿಳೆಯ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ವಾಮೀಜಿ ಓರ್ವರಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ಕಿತ್ತ ಆರೋಪದಲ್ಲಿ ಚಿಕ್ಕಮಗಳೂರು ಮೂಲದ ಮಹಿಳೆಯ ಬಂಧನವಾಗಿದೆ.

ಒಂದು ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿ, 4.5 ಲಕ್ಷ ರೂಪಾಯಿ ವಸೂಲಿ ಮಾಡಿದ್ದ ಆರೋಪದ ಮೇಲೆ ಚಿಕ್ಕಮಗಳೂರು ಮೂಲದ ಸ್ಪೂರ್ತಿ ಎಂಬಾಕೆಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ ಐದು ತಿಂಗಳ ಹಿಂದೆ ಸ್ಪೂರ್ತಿ ಎಂಬಾಕೆ ಸ್ವಾಮೀಜಿಗೆ ಕರೆ ಮಾಡಿ ತಾನು ತಿಪಟೂರಿನಲ್ಲಿ ವ್ಯಾಸಂಗ ಮಾಡಿದ್ದಾಗಿ ಪರಿಚಯ ಮಾಡಿಕೊಂಡಿದ್ದಳು. ನಂತರ ಸ್ವಾಮೀಜಿಯ ಬಳಿ ಹಣಕ್ಕೆ ಬೇಡಿಕೆ ಇಡಲು ಶುರುಮಾಡಿದಳು. ಹಣ ನೀಡದಿದ್ದರೆ ಮಾನಹಾನಿ ಮಾಡುವುದಾಗಿ ಹಾಗೂ ಜೀವ ಬೆದರಿಕೆ ಹಾಕುವುದಾಗಿ ಹೆದರಿಸಿದ್ದಳು.

ಇದರಿಂದ ಬೆದರಿದ ಸ್ವಾಮೀಜಿ ಬೆಂಗಳೂರಿಗೆ ಬಂದಾಗ ಸ್ಪೂರ್ತಿಗೆ 4.5 ಲಕ್ಷ ರೂ. ನೀಡಿದ್ದರು. ಆದರೂ ಸ್ಪೂರ್ತಿ ತನ್ನ ಸಹಚರರೊಂದಿಗೆ ಸೇರಿಕೊಂಡು ಇನ್ನೂ ಒಂದು ಕೋಟಿ ರೂ. ನೀಡಬೇಕೆಂದು ನಿರಂತರವಾಗಿ ಬೆದರಿಕೆ ಹಾಕಿದ್ದಳು. ಕೊನೆಗೆ ಅನಿವಾರ್ಯವಾಗಿ ಸ್ವಾಮೀಜಿ ಸಿಸಿಬಿ ಪೊಲೀಸರ ಮೊರೆ ಹೋಗಿದ್ದರು. ಸಿಸಿಬಿ ಪೊಲೀಸರು ಆರೋಪಿ ಸ್ಪೂರ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದೇ ಸ್ವಾಮೀಜಿ ಎರಡು ವರ್ಷದ ಹಿಂದೆಯೂ ಹನಿಟ್ರ್ಯಾಪ್‌ಗೆ ಒಳಗಾಗಿದ್ದರು. ಆಗಲೂ ಬೆಂಗಳೂರು ಸಿಸಿಬಿ ಪೊಲೀಸರು ತನಿಖೆ ನಡೆಸಿ, ಆರು ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ ಓರ್ವ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದರು.

ಈ ಕೇಸಿಗೆ ಸಂಬಂಧಿಸಿದಂತೆ ಸ್ವಾಮೀಜಿ ನ್ಯಾಯಾಲಯದ ಮೊರೆ ಹೋಗಿ ತಮಗೆ ಸಂಬಂಧಿಸಿದ ಯಾವುದೇ ಹೆಸರು, ಫೋಟೋ ಅಥವಾ ವೀಡಿಯೊಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ.

Must Read