January22, 2026
Thursday, January 22, 2026
spot_img

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಿದೇಶಿ ಮಹಿಳೆಗೆ ಕಿರುಕುಳ: ಸಿಬ್ಬಂದಿ ಕೆಲಸದಿಂದ ವಜಾ, ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯೊಬ್ಬರು ಟಿಕೆಟ್ ಮತ್ತು ಲಗೇಜುಗಳನ್ನು ಪರಿಶೀಲಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕೊರಿಯಾದ ಪ್ರವಾಸಿಯೊಬ್ಬರು ಆರೋಪಿಸಿದ್ದಾರೆ.

ಯುವತಿಯು ವಲಸೆ (ಇಮಿಗ್ರೇಷನ್) ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ, ಜನವರಿ 19ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಅಫಾನ್ ಅಹ್ಮದ್ ಎಂದು ಗುರುತಿಸಲಾದ ಆರೋಪಿ, ಲಗೇಜುಗಳ ಪರಿಶೀಲನೆ ನಡೆಸಬೇಕಿದೆ ಎಂದು ಹೇಳಿ ಯುವತಿಯನ್ನು ಸಂಪರ್ಕಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಎಫ್‌ಐಆರ್ ಪ್ರಕಾರ, ಅಹ್ಮದ್‌ನು ಯುವತಿಗೆ ಆಕೆಯ ಚೆಕ್-ಇನ್ ಲಗೇಜ್‌ನಲ್ಲಿ ಬೀಪ್ ಶಬ್ಧ ಬರುತ್ತಿದೆ ಎಂದು ಹೇಳಿದ್ದಾನೆ. ಕೌಂಟರ್‌ನಲ್ಲಿ ಸುದೀರ್ಘ ಪರಿಶೀಲನೆ ನಡೆಸಿದರೆ ವಿಮಾನ ವಿಳಂಬವಾಗಬಹುದು ಎಂದು ಹೇಳಿ, ಬದಲಾಗಿ ವೈಯಕ್ತಿಕ ತಪಾಸಣೆ ನಡೆಸುವುದೇ ಉತ್ತಮ ಎಂದು ಅವನು ಸೂಚಿಸಿದ್ದಾನೆ ಎಂದು ದಾಖಲಿಸಲಾಗಿದೆ.

ಆರೋಪಿಯು ಯುವತಿಯನ್ನು ಶೌಚಾಲಯದ ಸಮೀಪಕ್ಕೆ ಕರೆದೊಯ್ದು, ಆಕೆಯ ಅನುಮತಿ ಇಲ್ಲದೆ ಎದೆ ಹಾಗೂ ಖಾಸಗಿ ಅಂಗಗಳನ್ನು ಸ್ಪರ್ಶಿಸಿದ್ದಾನೆ. ಯುವತಿಯು ವಿರೋಧ ವ್ಯಕ್ತಪಡಿಸಿದಾಗ, ಓಕೆ ಧನ್ಯವಾದಗಳು ಎಂದು ಹೇಳಿ ಆತ ಅಲ್ಲಿಂದ ಹೊರಟುಹೋದನು ಎನ್ನಲಾಗಿದೆ.

ಈ ಘಟನೆಗೆ ಬೆಚ್ಚಿಬಿದ್ದ ಮಹಿಳೆ ತಕ್ಷಣವೇ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ದೂರು ದಾಖಲಿಸಿದರು. ಅವರ ದೂರಿನ ಆಧಾರದಲ್ಲಿ ಅಧಿಕಾರಿಗಳು ಅಫಾನ್ ಅಹ್ಮದ್‍ನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಎಫ್‌ಐಆರ್ ಆಧರಿಸಿ, ಆರೋಪಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಧಿಕೃತ ತನಿಖೆ ಆರಂಭಿಸಿದ್ದಾರೆ.

ಆರೋಪಿ ಸಿಬ್ಬಂದಿಯು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಗ್ರೌಂಡ್‌ ಹ್ಯಾಂಡ್ಲಿಂಗ್‌ ಸೇವೆ ಒದಗಿಸುವ AISATS ಸಂಸ್ಥೆ ಸಿಬ್ಬಂದಿ ಎಂದು ತಿಳಿದುಬಂದಿದೆ. ಈ ಬಗ್ಗೆ AISATS ಸಂಸ್ಥೆ ಪ್ರತಿಕ್ರಿಯಿಸಿದ್ದು, ‘ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಕ್ಷಮೆಗೆ ಅರ್ಹವಲ್ಲದ ಘಟನೆಯೊಂದು ವರದಿಯಾಗಿದೆ. ಈ ವಿಷಯದಲ್ಲಿ ಭಾಗಿಯಾದ ಉದ್ಯೋಗಿಯನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಲಾಗಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಘಟನೆಯಿಂದ ಉಂಟಾದ ಮಾನಸಿಕ ತಲ್ಲಣಕ್ಕೆ ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ಜೊತೆಗೆ, ಸಂತ್ರಸ್ತ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡಿದ್ದೇವೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಮತ್ತು ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲು ಆಂತರಿಕ ವಿಚಾರಣೆ ನಡೆಸಲಾಗುತ್ತಿದೆ. AISATS ಸಂಸ್ಥೆಯು ತನಿಖಾಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದು; ನೈತಿಕತೆ, ಸುರಕ್ಷತೆ ಮತ್ತು ನಿಯಮಗಳ ಪಾಲನೆಯ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸದಾ ಬದ್ಧವಾಗಿದೆ ಎಂದು ತಿಳಿಸಿದೆ.

Must Read