January22, 2026
Thursday, January 22, 2026
spot_img

ಆಸ್ಟ್ರೇಲಿಯಾದಂತೆ ಇಲ್ಲೂ ಅಪ್ರಾಪ್ತರಿಗೆ ಸೋಶಿಯಲ್‌ ಮೀಡಿಯಾ ಬಳಕೆ ಬ್ಯಾನ್ ಆಗುತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾ ಜಾರಿಗೆ ತಂದಿರುವ ಕಾನೂನಿನ ಮಾದರಿಯಲ್ಲೇ ಆಂಧ್ರ ಪ್ರದೇಶ ಸರ್ಕಾರವು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸುವ ಕುರಿತು ಚಿಂತನೆ ನಡೆಸಿದೆ ಎಂದು ಐಟಿ ಸಚಿವ ನಾರಾ ಲೋಕೇಶ್ ತಿಳಿಸಿದ್ದಾರೆ.

ಡಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನೋಮಿಕ್ ಫೋರಮ್‌ನಲ್ಲಿ ಬ್ಲೂಂಬರ್ಗ್‌ ಜತೆ ಮಾತನಾಡಿದ ಲೋಕೇಶ್, ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಷಯಗಳ ಅರ್ಥವನ್ನು ಸಂಪೂರ್ಣವಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಲಿಷ್ಠ ಕಾನೂನು ಚೌಕಟ್ಟಿನ ಅಗತ್ಯವಿದೆ ಎಂದು ಹೇಳಿದರು.

ಕಡಿಮೆ ವಯಸ್ಸಿನೊಳಗಿನ ಮಕ್ಕಳು ಅಂತಹ ವೇದಿಕೆಗಳಲ್ಲಿ ಇರಬಾರದು. ಅವರು ತಮಗೆ ತಲುಪುವ ವಿಷಯಗಳ ಪರಿಣಾಮವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಬಲಿಷ್ಠ ಕಾನೂನು ವ್ಯವಸ್ಥೆ ಅಗತ್ಯವಾಗಬಹುದು ಎಂದು ಲೋಕೇಶ್ ತಿಳಿಸಿದ್ದಾರೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥನಿ ಆಲ್ಬನೀಸ್ ನೇತೃತ್ವದ ಸರ್ಕಾರವು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಟಿಕ್‌ಟಾಕ್, ಎಕ್ಸ್ (ಟ್ವಿಟರ್), ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಮತ್ತು ಸ್ನ್ಯಾಪ್‌ಚಾಟ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸಿತ್ತು.

ಆಂಧ್ರ ಪ್ರದೇಶದ ಸ್ಥಳೀಯ ಮಾಧ್ಯಮಗಳ ಪ್ರಕಾರ, ರಾಜ್ಯ ಸರ್ಕಾರ ಈ ರೀತಿಯ ಕ್ರಮವನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ಇದು ಜಾರಿಗೆ ಬಂದರೆ, ಸಾಮಾಜಿಕ ಜಾಲತಾಣ ಬಳಕೆಗೆ ಮಕ್ಕಳ ಮೇಲೆ ನಿರ್ಬಂಧ ತರಲಿರುವ ಭಾರತದ ಮೊದಲ ರಾಜ್ಯವಾಗಿ ಆಂಧ್ರ ಪ್ರದೇಶ ಹೊರಹೊಮ್ಮಲಿದೆ.

Must Read