January22, 2026
Thursday, January 22, 2026
spot_img

ಕಾಡುಪ್ರಾಣಿಯ ಮಾಂಸ ಅಕ್ರಮ ಸಾಗಾಟ: ಮಾಲು ಸಹಿತ ದ್ವಿಚಕ್ರ ವಾಹನ ವಶ, ಆರೋಪಿಯ ಬಂಧನ

ಹೊಸದಿಗಂತ ವರದಿ, ದಾಂಡೇಲಿ:

ನಗರದ ಬರ್ಚಿ ರಸ್ತೆಯಲ್ಲಿ ದ್ವಿಚಕ್ರ ವಾಹನದ ಮೂಲಕ ಅಕ್ರಮವಾಗಿ ಕಾಡುಪ್ರಾಣಿಯ ಮಾಂಸ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಮಾಲು ಸಹಿತ ದ್ವಿಚಕ್ರ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ವಶಪಡಿಸಿಕೊಂಡಿರುವ ಬಗ್ಗೆ ಗುರುವಾರ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.

ನಗರದ ಗ್ರಾಮೀಣ ಪೋಲಿಸ್ ವಸತಿ ಗೃಹದ ಹತ್ತಿರ ಬರ್ಚಿ ರಸ್ತೆಯಲ್ಲಿ ಅಕ್ರಮವಾಗಿ ಕಾಡುಪ್ರಾಣಿಯ ಮಾಂಸವನ್ನು ತಾಲೂಕಿನ ಕೆರವಾಡದ ನಿವಾಸಿ ರಾಜು ಮಂಜು ಪೋತದಾರ ಎಂಬಾತನು ತಮ್ಮ ದ್ವಿಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ, ಈತನನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಕಾಡುಪ್ರಾಣಿಯ ಮಾಂಸ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಮಾಲು ಸಹಿತ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಪ್ರಕಾರ ಪ್ರಕರಣವನ್ನು ದಾಖಲಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಕೆ.ಸಿ, ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಚೌವ್ಹಾಣ್ ಅವರ ಮಾರ್ಗದರ್ಶನದಲ್ಲಿ ವಲಯಾರಣ್ಯಾಧಿಕಾರಿ ಎನ್. ಎಲ್ ನದಾಪ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಸಂದೀಪ್ ನಾಯ್ಕ, ಲೋಕೇಶ, ಬಸಪ್ಪ ನ್ಯಾಮಗೌಡ, ಜ್ಯೋತಿ ನಂದಿಕೋಡ ಹಾಗೂ ಗಸ್ತು ಅರಣ್ಯ ಪಾಲಕರಾದ ನಾರಾಯಣ ಜುಂಜವಾಡಕರ, ಮೋಹನ ಗೌಡ, ಸವಿತಾ ಮತ್ತು ಕ್ಷೇಮಾಭಿವೃದ್ಧಿ ನೌಕರ ಚಂದ್ರಶೇಖರ ಮಿರಾಶಿ ಪಾಲ್ಗೊಂಡಿದ್ದರು.

Must Read