ಹೊಸದಿಗಂತ ವರದಿ, ಮಂಗಳೂರು:
ಕಳೆದ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ‘ದಂಡುಪಾಳ್ಯ ಗ್ಯಾಂಗ್’ನ ಸದಸ್ಯನೊಬ್ಬನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸಕೋಟೆ ತಾಲೂಕಿನ ದಂಡುಪಾಳ್ಯ ಗ್ರಾಮದ ಚಿಕ್ಕ ಹನುಮ ಯಾನೆ ಚಿಕ್ಕ ಹನುಮಂತಪ್ಪ ಯಾನೆ ಕೆ. ಕೃಷ್ಣಪ್ಪ ಯಾನೆ(55) ಬಂಧಿತ. ಆಂದ್ರಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಈತ 1997 ರ ಸಾಲಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಈತ ದಂಡುಪಾಳ್ಯ ಗ್ಯಾಂಗ್ ಎಂದೇ ಕುಖ್ಯಾತಿ ಪಡೆದಿರುವ ಗ್ಯಾಂಗ್ ನ ಸಹಚರನಾಗಿದ್ದಾನೆ. ಈತನನ್ನು ಆಂದ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ, ಮದನಪಳ್ಳೆ ಎಂಬಲ್ಲಿ ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
1997ರ ಮಧ್ಯಾರಾತ್ರಿ ಮಂಗಳೂರು ತಾಲೂಕು ಉರ್ವಾ ಮಾರಿಗುಡಿ ಕ್ರಾಸ್ ಬಳಿರುವ ಅನ್ವರ್ ಮಹಲ್ ಎಂಬ ಮನೆಗೆ ನುಗ್ಗಿದ ದಂಡುಪಾಳ್ಯ ಗ್ಯಾಂಗ್ ಎಂದೇ ಕುಖ್ಯಾತಿ ಪಡೆದಿರುವ ಗ್ಯಾಂಗ್ ನ ಸಹಚರಗಳಾದ ದೊಡ್ಡ ಹನುಮ ,ವೆಂಕಟೇಶ ಯಾನೆ ಚಂದ್ರ, ಮುನಿಕೃಷ್ಣ , ನಲ್ಲತಿಮ್ಮ, ದಂಡುಪಾಳ್ಯ ಕೃಷ್ಣ ಯಾನೆ ನಾಗರಾಜ, ಚಿಕ್ಕ ಹನುಮ, ಕೃಷ್ಣಾಡು ಯಾನೆ ಕೃಷ್ಣ, ವೆಂಕಟೇಶ್, ರಮೇಶ್ ಇವರುಗಳು ಮನೆಯಲ್ಲಿದ್ದ 80ರ ಹರೆಯದ ಲೂವಿಸ್ ಡಿಮೆಲ್ಲೋ ಹಾಗೂ 19ರ ಹರೆಯದ ರಂಜಿತ್ ವೇಗಸ್‌ನನ್ನು ಕೊಲೆ ಮಾಡಿ ಚಿನ್ನಾಭರಣಗಳ್ನು ದೋಚಿಕೊಂಡು ಹೋಗಿದ್ದರು. ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದಲ್ಲಿ ಚಿಕ್ಕ ಹನುಮ ತಲೆಮರೆಸಿಕೊಂಡಿದ್ದ.
ಆರೋಪಿ ಚಿಕ್ಕ ಹನುಮನ ಮೇಲೆ ರಾಜ್ಯದಲ್ಲಿ ಸುಮಾರು 13 ಕೊಲೆ ,ದರೋಡೆ ಪ್ರಕರಣಗಳು ದಾಖಲಾಗಿದೆ.
ಪತ್ತೆ ಕಾರ್ಯದಲ್ಲಿ ಉರ್ವಾ ಪೊಲೀಸ್ ಠಾಣೆಯ ನಿರೀಕ್ಷಕರಾದ ಶ್ಯಾಮ್ ಸುಂಧರ್ ಎಚ್.ಎಮ್ , ಪಿಎಸ್‌ಐ ಗುರಪ್ಪ ಕಾಂತಿ, ಪಿಎಸ್‌ಐ ಎಲ್.ಮಂಜುಳಾ ಎಎಸ್‌ಐ ವಿನಯ ಕುಮಾರ್ ಮತ್ತು ಸಿಬ್ಬಂದಿಗಳಾದ ಲಲಿತಲಕ್ಷ್ಮಿ, ಅನಿಲ್, ಪ್ರಮೋದ್, ಆತ್ನಾನಂದ , ಹರೀಶ್ ರವರು ಶ್ರಮಿಸಿರುತ್ತಾರೆ. ಸದ್ರಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಶಾಂಸೆಯನ್ನು ವ್ಯಕ್ತ ಪಡಿಸಿ, ಹೆಚ್ಚು ಬಹುಮಾನಕ್ಕಾಗಿ ಕರ್ನಾಟಕ ರಾಜ್ಯದ ಡಿಜಿ,ಐಜಿಪಿ ರವರಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.


