ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ ನಟ ‘ಗೋಲ್ಡನ್ ಸ್ಟಾರ್’ ಗಣೇಶ್ ಮತ್ತು ‘ಎವರ್‌ಗ್ರೀನ್’ ನಟ ರಮೇಶ್ ಅರವಿಂದ್ ಅವರು ಬಹುನಿರೀಕ್ಷಿತ ಚಿತ್ರ ‘ಯುವರ್ ಸಿನ್ಸಿಯರ್ಲಿ ರಾಮ್’ ಎಂಬ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ.
ಸದ್ಯ ಈ ಚಿತ್ರತಂಡ ಕಾಶ್ಮೀರದ ಸುಂದರ ತಾಣವಾದ ಪಹಲ್ಗಾಮ್‌ನಲ್ಲಿ ಬೀಡುಬಿಟ್ಟಿದ್ದು, ಅಲ್ಲಿನ ಮೈನಡುಗಿಸುವ ಚಳಿಯಲ್ಲಿ ಚಿತ್ರೀಕರಣ ನಡೆಸುತ್ತಿದೆ.
ಸುರಕ್ಷತೆಯ ದೃಷ್ಟಿಯಿಂದ ನಿರ್ಮಾಪಕರು ಚಿತ್ರೀಕರಣವನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಮುಂದೂಡಿದ್ದರು. ಇದೀಗ ಅಲ್ಲಿನ ಪರಿಸ್ಥಿತಿ ಶಾಂತವಾಗಿದ್ದು, ಚಿತ್ರತಂಡ ಶ್ರೀನಗರ ಮತ್ತು ಪಹಲ್ಗಾಮ್‌ನಲ್ಲಿ ಶೂಟಿಂಗ್ ಆರಂಭಿಸಿದೆ.
ಈ ಬಗ್ಗೆ ಮಾತನಾಡಿರುವ ಚಿತ್ರದ ನಿರ್ಮಾಪಕಿ ಜಾನ್ವಿ ರಾಯಲ, “ನಾವು ಈಗ ಇಲ್ಲಿ ತುಂಬಾ ಸುರಕ್ಷಿತವಾಗಿದ್ದೇವೆ. ಸುತ್ತಲೂ ಸಿಆರ್‌ಪಿಎಫ್ (CRPF) ಮತ್ತು ಪೊಲೀಸರ ಬಿಗಿ ಭದ್ರತೆ ಇದೆ. ನಾವು ಚಿತ್ರೀಕರಣ ಮಾಡುವಾಗ ಪೊಲೀಸರು ಸದಾ ಜಾಗರೂಕರಾಗಿರುತ್ತಾರೆ. ಹೀಗಾಗಿ ನಮಗೆ ಯಾವುದೇ ಭಯವಿಲ್ಲ” ಎಂದು ತಿಳಿಸಿದ್ದಾರೆ.
ನಾವು ಬೆಂಗಳೂರಿನಿಂದ ತಂದ ಪ್ರತಿಯೊಂದು ವಸ್ತುವನ್ನು, ಅಡುಗೆ ಮಾಡುವ ಪಾತ್ರೆ ಮತ್ತು ಸ್ಟೌವ್‌ಗಳನ್ನು ಕೂಡ ಕೂಲಂಕಷವಾಗಿ ಸ್ಕ್ಯಾನ್ ಮಾಡಲಾಗುತ್ತದೆ. ಬೆಂಗಳೂರಿನಿಂದ ಕಳುಹಿಸಿದ ಪ್ರೊಪ್ಸ್ (Props) ನಮಗೆ ತಲುಪಲು 3-4 ದಿನ ಬೇಕಾಯಿತು. ಇದರಿಂದ ಶೂಟಿಂಗ್ ಸ್ವಲ್ಪ ವಿಳಂಬವಾದರೂ, ಸುರಕ್ಷತೆಯ ದೃಷ್ಟಿಯಿಂದ ಈ ನಿಯಮಗಳು ಅಗತ್ಯವಾಗಿವೆ ಎಂದು ಅವರು ವಿವರಿಸಿದ್ದಾರೆ.
ಈ ಸಿನಿಮಾದ ನಿರ್ದೇಶಕರು ಕಾಶ್ಮೀರದ ನೈಜ ಸೌಂದರ್ಯವನ್ನು ತೆರೆಯ ಮೇಲೆ ತರಲು ಹಠ ತೊಟ್ಟಿದ್ದರು. ಯಾವುದೇ ಹಂತದಲ್ಲೂ ಸಿಜಿಐ (CGI) ಅಥವಾ ಗ್ರೀನ್ ಮ್ಯಾಟ್ ಬಳಸಲು ಅವರು ಇಷ್ಟಪಡಲಿಲ್ಲ. ನಮ್ಮ ನಿರ್ದೇಶಕರು ಇಲ್ಲಿನ ನೈಜ ಲೋಕೇಶನ್‌ಗಳಲ್ಲೇ ಶೂಟಿಂಗ್ ಮಾಡಬೇಕೆಂದು ಬಯಸಿದ್ದರು. ಅದಕ್ಕಾಗಿಯೇ ನಾವು ಪರಿಸ್ಥಿತಿ ತಿಳಿಯಾಗುವವರೆಗೆ ಇಷ್ಟು ದಿನ ಕಾಯಬೇಕಾಯಿತು ಎಂದು ಜಾನ್ವಿ ಹೇಳಿದ್ದಾರೆ.
“ನಾವು ಯಾವಾಗಲೂ ವಿದೇಶಗಳಿಗೆ ಪ್ರವಾಸ ಹೋಗುವ ಬದಲು, ನಮ್ಮ ದೇಶದ ಇಂತಹ ಸುಂದರ ತಾಣಗಳಿಗೆ ಭೇಟಿ ನೀಡಿ ಇಲ್ಲಿನ ಪ್ರವಾಸೋದ್ಯಮಕ್ಕೆ ಬೆಂಬಲ ನೀಡಬೇಕು ಎಂದು ಅವರು ಭಾರತೀಯರಿಗೆ ಮನವಿ ಮಾಡಿದ್ದಾರೆ.


