ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಪರಮಾಪ್ತ, ಮುಡಾದ ಮಾಜಿ ಅಧ್ಯಕ್ಷ ಮರೀಗೌಡ ಕೂಡ ಅಕ್ರಮ ನಿವೇಶನ ಪಡೆದಿರುವುದು ಬೆಳಕಿಗೆ ಬಂದಿದೆ. ಇಡಿ ದಾಳಿ ವೇಳೆ ಸೈಟ್‌ಗಳ ಹಂಚಿಕೆಯಲ್ಲಿ ನಿಯಮಗಳನ ಉಲ್ಲಂಘನೆ ಕಂಡುಬಂದಿತ್ತು. ಹೀಗಾಗಿ ಇಡಿ, ಮರಿಗೌಡಗೆ ಸೇರಿದ 10 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ಮುಡಾ ಅಕ್ರಮದಲ್ಲಿ ಮರಿಗೌಡ ಅವರು ನೇರವಾಗಿ ಭಾಗಿಯಾಗಿರುವುದು ತನಿಖೆಯ ವೇಳೆ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೇರಿದ ಒಟ್ಟು 10 ಸ್ಥಿರ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ 6 ಅಕ್ರಮ ಮುಡಾ ನಿವೇಶನಗಳು, 3 ಇತರ ಸ್ಥಿರ ಆಸ್ತಿಗಳು ಹಾಗೂ ಬರೋಬ್ಬರಿ 20.85 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯದ ಒಂದು ಬೃಹತ್ ವಾಣಿಜ್ಯ ಕಟ್ಟಡ ಸೇರಿದೆ.
ಮುಡಾದ ಮಾಜಿ ಆಯುಕ್ತ ಜಿ ಟಿ ದಿನೇಶ್ ಕುಮಾರ್ ಅವರ ಸಹಾಯದಿಂದಲೇ ಮರಿಗೌಡ ಅವರು ಈ ಅಕ್ರಮ ನಿವೇಶನಗಳನ್ನು ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗಿದೆ. ಸೈಟ್ ಹಂಚಿಕೆಯಲ್ಲಿ ಕಾನೂನು ಮತ್ತು ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಲಾಗಿದ್ದು, ದಿನೇಶ್ ಕುಮಾರ್ ಅವರು ಮರಿಗೌಡಗೆ ಅಕ್ರಮ ಎಸಗಲು ಪರೋಕ್ಷವಾಗಿ ಸಾಥ್ ನೀಡಿದ್ದಾರೆ ಎಂಬ ಅಂಶ ವಿಚಾರಣೆಯಲ್ಲಿ ಬಯಲಾಗಿದೆ.


