Friday, January 23, 2026
Friday, January 23, 2026
spot_img

ರಾಜ್ಯಪಾಲರ ಭಾಷಣದಲ್ಲಿ ಯಾವುದೇ ಅಗೌರವ ಅಗಿಲ್ಲ: ಸಭಾಪತಿ ಹೊರಟ್ಟಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಧಿವೇಶನದಲ್ಲಿನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾಡಿದ ಚುಟುಕು ಭಾಷಣಕ್ಕೆ ಸಿದ್ದರಾಮಯ್ಯ ಸರಕಾರ ತ್ರೀವ ಅಸಮಾಧಾನಗೊಂಡಿದೆ .ಇದರ ಬೆನ್ನಲ್ಲೇ ಸಭಾಪತಿ ಬಸವರಾಜ ಹೊರಟ್ಟಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಲಿಖಿತ ಭಾಷಣದ ಮೊದಲ ಹಾಗೂ ಕೊನೆಯ ಪ್ಯಾರಾಗಳನ್ನು ಓದಿರುವುದರಿಂದ ಇಡೀ ಭಾಷಣ ವಾಚಿಸಿದಂತಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಹೀಗಾಗಿ, ಅದನ್ನು ‘ರೀಡ್‌ ಅಂಡ್‌ ರೆಕಾರ್ಡ್‌’ ಎಂದು ಹೇಳಬೇಕಾಗುತ್ತದೆ ಎಂದರು.

ವಿಧಾನ ಪರಿಷತ್ತಿನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಸಭಾನಾಯಕ ಎನ್‌.ಎಸ್‌. ಬೋಸರಾಜು, ರಾಜ್ಯಪಾಲರು ಸಂವಿಧಾನದ 176 ಮತ್ತು 163 ವಿಧಿಯ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಈ ರೀತಿ ನಡೆದುಕೊಳ್ಳುವ ಮೂಲಕ ಸದನಕ್ಕೆ ಅಗೌರವ ತೋರಿಸಿದ್ದಾರೆ, ಅವರ ನಡವಳಿಕೆ ಖಂಡನೀಯ ಎಂದರು.

ಇದಕ್ಕೆ ಬಿಜೆಪಿಯ ಅನೇಕ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ರಾಜ್ಯಪಾಲರು ಸರಿಯಾಗಿ ನಡೆದುಕೊಂಡಿದ್ದಾರೆ ಎಂದು ವಾದಿಸಿದರೆ, ಆಡಳಿತಾರೂಢ ಕಾಂಗ್ರೆಸ್‌ ಸದಸ್ಯರು ರಾಜ್ಯಪಾಲರು ಸಂವಿಧಾನದ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಜೋರಾಗಿ ಹೇಳತೊಡಗಿದರು.

ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್‌ ಅವರು, ಮೊದಲ ಬಾರಿಗೆ ರಾಜ್ಯದಲ್ಲಿ ರಾಜ್ಯಪಾಲರು ಸರ್ಕಾರ ನೀಡಿದ ಭಾಷಣ ಓದದಿರುವದು ಖಂಡನೀಯ. ಇಂತಹ ಅಗೌರವ ಎಂದೂ ಆಗಿಲ್ಲ. ಸಂವಿಧಾನಕ್ಕೆ ರಾಜ್ಯಪಾಲರು ಅಪಚಾರ ಮಾಡಿದ್ದಾರೆ ಎಂದು ಪ್ರತಿ ವಾದಿಸಿದರು.

ಕೊನೆಗೆ ಸಭಾಪತಿ ಹೊರಟ್ಟಿ ಅವರು ಈ ವಿಷಯವನ್ನು ಕಲಾಪ ಸಲಹಾ ಸಮಿತಿಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಹೇಳಿದರು.

Must Read