ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನಿಂದ ಕಾಸರಗೋಡಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಬಿಗ್ ಶಾಕ್ ನೀಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಈ ಮಾರ್ಗದಲ್ಲಿ ಸಂಚಾರಿಸುವ ಬಸ್ಗಳ ಟಿಕೆಟ್ ದರವನ್ನು ಹೆಚ್ಚು ಮಾಡಿದ್ದಾರೆ.
ಮಂಗಳೂರು-ಕಾಸರಗೋಡು ಮಾರ್ಗದ ಕುಂಬಳೆಯಲ್ಲಿ ಅಧಿಕೃತವಾಗಿ ಟೋಲ್ ಸಂಗ್ರಹ ಪ್ರಾರಂಭವಾಗುವ ಮೊದಲೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಜ. 20ರಿಂದ ಅಂದರೆ ಮಂಗಳವಾರದಿಂದ ಈ ಟೋಲ್ ಮೊತ್ತವನ್ನು ಸೇರಿಸುವ ಮೂಲಕ ಪರಿಷ್ಕೃತ ದರವನ್ನು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಗ್ರಹ ಮಾಡಲು ಶುರು ಮಾಡಿದೆ. ಇದರ ಜತೆಗೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕೂಡ ಟಿಕೆಟ್ ದರದಲ್ಲಿ ಬದಲಾವಣೆಗಳನ್ನು ತಂದಿದೆ. ಕುಂಬಳೆದಿಂದ ಮಂಗಳೂರಿಗೆ ಈ ಹಿಂದೆ 67 ರೂ. ಇದ್ದ ಪ್ರಯಾಣ ದರವನ್ನು ಈಗ 75 ರೂ.ಗೆ ಹೆಚ್ಚಿಸಿದೆ.
ರಾಜಹಂಸ ಬಸ್ಗಳ ದರವನ್ನು ಕೂಡ 10 ರೂ. ವರೆಗೆ ಹೆಚ್ಚಿಸಿದೆ. 80 ರೂ.ನಿಂದ 90 ರೂ.ಗೆ ಏರಿಕೆಯಾಗಿದೆ.
ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳು ಟಿಕೆಟ್ ದರವನ್ನು 7 ರೂ. ಹೆಚ್ಚಿಸಿದ್ದು ಈಗಾಗಲೇ ಈ ದರ ಜಾರಿಯಲ್ಲಿದೆ. ಇನ್ನು ಟೋಲ್ ಪಾವತಿಯಿಂದ ವಿನಾಯಿತಿ ನೀಡುವಂತೆ ಕೋರಿ ಕರ್ನಾಟಕ ಸಾರಿಗೆ ಇಲಾಖೆಯ ಮಂಗಳೂರು ವಿಭಾಗದ ಅಧಿಕಾರಿಗಳು ಕಾಸರಗೋಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕಾಸರಗೋಡು-ಮಂಗಳೂರು ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಕರ್ನಾಟಕ ಸಾರಿಗೆ ಬಸ್‌ಗಳು ಸಂಪೂರ್ಣವಾಗಿ ಸರ್ವಿಸ್ ರಸ್ತೆಗಳಲ್ಲಿ ಸಂಚರಿಸುತ್ತವೆ. ಕುಂಬಳೆ ಟೋಲ್ ಗೇಟ್ ಬಿಟ್ಟು ಬೇರೆ ಯಾವುದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಬಸ್ಸುಗಳು ಹೋಗುವುದಿಲ್ಲ. ಹಾಗಾಗಿ ಟೋಲ್ ವಿನಾಯಿತಿ ನೀಡಬೇಕು ಎಂದು ಹೇಳಿದ್ದಾರೆ. ಒಂದು ವೇಳೆ ಈ ಬದಲಾವಣೆಯನ್ನು ಮಾಡದಿದ್ದರೆ, ಹೆಚ್ಚಿನ ಟಿಕೆಟ್ ದರಗಳ ಮೂಲಕ ಪ್ರಯಾಣಿಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯನ್ನು ಹಾಕಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕಾಸರಗೋಡು ಮಾರ್ಗದಲ್ಲಿ ಪ್ರತಿದಿನ ಸುಮಾರು 35 ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರಿಸುತ್ತದೆ. ಟೋಲ್ ಪಾವತಿಗಾಗಿ ದಿನಕ್ಕೆ ಸುಮಾರು 48,000 ರೂ. ವ್ಯಯ ಮಾಡುತ್ತಿದೆ. ಹೆದ್ದಾರಿಯನ್ನು ಬಳಸದಿದ್ದರೂ ಟೋಲ್ ಶುಲ್ಕವನ್ನು ಪಾವತಿಸಬೇಕಾಗಿರುವುದರಿಂದ ದರ ಏರಿಕೆ ಮಾಡುವ ಅನಿರ್ವಾಯವಾಗಿದೆ.
ಕೇರಳದ ಕೆಎಸ್‌ಆರ್‌ಟಿಸಿ ಬಸ್‌ಗಳು ಸಹ ಇದೇ ಮಾರ್ಗದಲ್ಲಿ ಸಂಚಾರ ಮಾಡುತ್ತದೆ. ಅದಕ್ಕೂ ಕೂಡ ಟೋಲ್ ದರ ಇದೆ. ಅವರು ಯಾವುದೇ ಟಿಕೆಟ್ ದರ ಹೆಚ್ಚು ಮಾಡಿಲ್ಲ. ಟಿಕೆಟ್ ದರಗಳನ್ನು ಪರಿಷ್ಕರಿಸಬೇಕಾದರೆ, ಸಾರಿಗೆ ಸಚಿವರು ಇಲಾಖಾ ಸಭೆ ನಡೆಸಿ, ನಿರ್ಧಾರ ತೆಗೆದುಕೊಂಡು ಅದಕ್ಕೆ ಅನುಗುಣವಾಗಿ ಅಧಿಕೃತ ಆದೇಶಗಳನ್ನು ಹೊರಡಿಸಬೇಕು ಎಂದು ಕಾಸರಗೋಡು ವಿಭಾಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.


