Friday, January 23, 2026
Friday, January 23, 2026
spot_img

ದಾವಣಗೆರೆಯಲ್ಲಿ ‘ರಿದ್ಧಿ ಸಿದ್ಧಿ’ ಪಾರುಪತ್ಯ: ಕಾರ್ಗಿಲ್ ಇಂಡಿಯಾ ಘಟಕ ಸ್ವಾಧೀನಕ್ಕೆ ಒಪ್ಪಂದ

ಹೊಸದಿಗಂತ ಬೆಂಗಳೂರು

ದೇಶದ ಪ್ರಮುಖ ಸ್ಟಾರ್ಚ್ ಉತ್ಪಾದನಾ ಕಂಪನಿಯಾದ ರಿದ್ಧಿ ಸಿದ್ಧಿ ಗ್ಲುಕೋ ಬಯೋಲ್ಸ್ ಲಿಮಿಟೆಡ್ (RSGBL), ಕರ್ನಾಟಕದ ದಾವಣಗೆರೆಯಲ್ಲಿರುವ ‘ಕಾರ್ಗಿಲ್ ಇಂಡಿಯಾ’ ಸಂಸ್ಥೆಯ ಸ್ಟಾರ್ಚ್ ಮತ್ತು ಸ್ವೀಟೆನರ್ಸ್ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ. ಈ ಕುರಿತು ಎರಡೂ ಕಂಪನಿಗಳು ಆಸ್ತಿ ಖರೀದಿ ಒಪ್ಪಂದಕ್ಕೆ ಸಹಿ ಹಾಕಿವೆ.

ದಾವಣಗೆರೆಯಲ್ಲಿರುವ 52 ಎಕರೆ ಪ್ರದೇಶದ ಬೃಹತ್ ಉತ್ಪಾದನಾ ಸೌಲಭ್ಯ, ಗೋದಾಮುಗಳು ಮತ್ತು ಕಾರ್ನ್ ಸಿಲೋಗಳು ಈಗ RSGBL ಪಾಲಾಗಲಿವೆ.

ಈ ಘಟಕವು ವಾರ್ಷಿಕ 3,00,000 ಮೆಟ್ರಿಕ್ ಟನ್ ಸಂಸ್ಕರಣಾ ಸಾಮರ್ಥ್ಯ ಹೊಂದಿದ್ದು, ಮಾಲ್ಟೋಡೆಕ್ಸ್ಟ್ರಿನ್, ದ್ರವ ಗ್ಲೂಕೋಸ್ ಹಾಗೂ ಪಶು ಆಹಾರದ ಉಪ-ಉತ್ಪನ್ನಗಳನ್ನು ತಯಾರಿಸುತ್ತದೆ.

ಈ ಘಟಕವನ್ನು ನವೀಕರಿಸಬಹುದಾದ ಇಂಧನ ಬಳಸಿ ನಿರ್ವಹಿಸಲು ಕಂಪನಿ ಯೋಜಿಸಿದ್ದು, ಪರಿಸರ ಸ್ನೇಹಿ ಉತ್ಪಾದನೆಗೆ ಒತ್ತು ನೀಡಲಿದೆ.

ಈ ಕ್ರಮದ ಕುರಿತು ಮಾತನಾಡಿದ RSGBL ಕಾರ್ಯನಿರ್ವಾಹಕ ನಿರ್ದೇಶಕ ಸಿದ್ಧಾರ್ಥ್ ಚೌಧರಿ, “ಈ ಸ್ವಾಧೀನವು ನಮ್ಮ ದೀರ್ಘಕಾಲೀನ ಬೆಳವಣಿಗೆಯ ಗುರಿಗೆ ಪೂರಕವಾಗಿದೆ. ಆಹಾರ ಮತ್ತು ಔಷಧೀಯ ವಲಯದಲ್ಲಿ ನಮ್ಮ ಮಾರುಕಟ್ಟೆಯನ್ನು ವಿಸ್ತರಿಸಲು ಹಾಗೂ ರಫ್ತು ಸಾಮರ್ಥ್ಯವನ್ನು ಹೆಚ್ಚಿಸಲು ದಾವಣಗೆರೆಯ ಈ ಆಯಕಟ್ಟಿನ ಸ್ಥಳವು ನಮಗೆ ಸಹಕಾರಿಯಾಗಲಿದೆ,” ಎಂದು ತಿಳಿಸಿದರು.

ಕಾರ್ಗಿಲ್ ಇಂಡಿಯಾ ಸಂಸ್ಥೆಯ ದಕ್ಷಿಣ ಏಷ್ಯಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಧೀರಜ್ ತಲ್ರೆಜಾ ಅವರು ಮಾತನಾಡಿ, RSGBL ಸಂಸ್ಥೆಯ ಈ ಹೊಸ ಹೆಜ್ಜೆಗೆ ಶುಭ ಹಾರೈಸಿದ್ದಾರೆ.

Must Read