ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ಧಮ್ತಾರಿ ಜಿಲ್ಲೆಯಲ್ಲಿ ನಕ್ಸಲ ಚಟುವಟಿಕೆಗಳಿಗೆ ದೊಡ್ಡ ಹಿನ್ನಡೆಯಾಗಿದೆ. ವಿವಿಧ ಪ್ರದೇಶ ಸಮಿತಿಗಳಲ್ಲಿ ಸಕ್ರಿಯರಾಗಿದ್ದ ಒಟ್ಟು 9 ಮಾವೋವಾದಿಗಳು ಪೊಲೀಸರ ಮುಂದೆ ಶರಣಾಗಿದ್ದು, ಇವರ ತಲೆಗೆ ಸೇರಿ 47 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶರಣಾದವರಲ್ಲಿ ಏಳು ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿದ್ದಾರೆ.
ಧಮ್ತಾರಿ–ಗರಿಯಾಬಂದ್–ನುವಾಪಾಡಾ ವಲಯದ ನಾಗ್ರಿ, ಸಿತಾನದಿ ಪ್ರದೇಶ ಸಮಿತಿ ಹಾಗೂ ಮೈನ್‌ಪುರ ಸ್ಥಳೀಯ ಗೆರಿಲ್ಲಾ ದಳಕ್ಕೆ ಸೇರಿದ ಈ ನಕ್ಸಲರು, ಮಾವೋವಾದಿ ತತ್ವ ಮತ್ತು ಅರಣ್ಯ ಜೀವನದ ಕಠಿಣತೆಯಿಂದ ಬೇಸತ್ತು ಈ ನಿರ್ಧಾರಕ್ಕೆ ಬಂದಿದ್ದಾರೆ.
ಶರಣಾದ ಪ್ರಮುಖರಲ್ಲಿ ಸಿತಾನದಿ ಪ್ರದೇಶ ಸಮಿತಿಯ ಕಾರ್ಯದರ್ಶಿ ಜ್ಯೋತಿ ಅಲಿಯಾಸ್ ಜೈನಿ ಮತ್ತು ವಿಭಾಗೀಯ ಸದಸ್ಯೆ ಉಷಾ ಅಲಿಯಾಸ್ ಬಾಲಮ್ಮ ಇದ್ದು, ಇವರಿಗೆ ತಲಾ 8 ಲಕ್ಷ ರೂ. ಬಹುಮಾನವಿತ್ತು. ಉಳಿದ ಏಳು ಮಂದಿಗೆ ತಲಾ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಈ ವೇಳೆ ಇವರು ಎರಡು ಇನ್ಸಾಸ್ ರೈಫಲ್, ಎರಡು ಎಸ್‌ಎಲ್‌ಆರ್, ಒಂದು ಕಾರ್ಬೈನ್ ಮತ್ತು ಒಂದು ಮಜಲ್ ಲೋಡಿಂಗ್ ಗನ್ ಅನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.


