Saturday, January 24, 2026
Saturday, January 24, 2026
spot_img

ಬಳ್ಳಾರಿಯಲ್ಲಿ ಧಗಧಗಿಸಿದ ಗಾಲಿ ಜನಾರ್ದನ ರೆಡ್ಡಿ ‘ಕನಸಿನ ಮನೆ’: ಆಕಸ್ಮಿಕವೋ?ದುಷ್ಕರ್ಮಿಗಳ ಕೈವಾಡವೋ?

ಹೊಸದಿಗಂತ ಬಳ್ಳಾರಿ:

ಗಂಗಾವತಿ ಶಾಸಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮಾಲೀಕತ್ವದ ಬಳ್ಳಾರಿಯ ಕುವೆಂಪು ನಗರದಲ್ಲಿರುವ ‘ಶ್ರೀಮತಿ ರುಕ್ಮಿಣಿಮ್ಮ ಚಂಗಾರೆಡ್ಡಿ’ ಬಡಾವಣೆಯಲ್ಲಿ ಶುಕ್ರವಾರ ಸಂಜೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ‘ಜಿ-ಸ್ಕ್ವೇರ್’ ಮಾದರಿಯ ಸುಸಜ್ಜಿತ ಮನೆಯೊಂದು ಬೆಂಕಿಗಾಹುತಿಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಹೈದರಾಬಾದ್ ಮೂಲದ ಜಿ-ಸ್ಕ್ವೇರ್ ಕಂಪನಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಈ ಲೇಔಟ್‌ನಲ್ಲಿ, ನಿವೇಶನಗಳ ಮಾರಾಟದ ಪ್ರಚಾರಕ್ಕಾಗಿ ಜನಾರ್ದನ ರೆಡ್ಡಿ ಅವರು ಅತ್ಯಂತ ಆಕರ್ಷಕ ‘ಮಾದರಿ ಮನೆ’ಯನ್ನು ನಿರ್ಮಿಸಿದ್ದರು. ಶುಕ್ರವಾರ ಸಂಜೆ ಇದ್ದಕ್ಕಿದ್ದಂತೆ ಈ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಜ್ವಾಲೆ ವ್ಯಾಪಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಜಿ-ಸ್ಕ್ವೇರ್ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬೆಂಕಿ ಅವಘಡದ ಹಿಂದೆ ದುಷ್ಕರ್ಮಿಗಳ ಕೈವಾಡವಿರಬಹುದು ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಇತ್ತೀಚೆಗೆ ನಡೆದ ಬ್ಯಾನರ್ ಹರಿದು ಹಾಕಿದ ಗಲಾಟೆಯ ಹಿನ್ನೆಲೆಯಲ್ಲಿ ಯಾರಾದರೂ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರಬಹುದೇ ಎಂಬ ಆಯಾಮದಲ್ಲಿ ಚರ್ಚೆಗಳು ನಡೆಯುತ್ತಿವೆ. ಘಟನೆ ತಿಳಿಯುತ್ತಿದ್ದಂತೆಯೇ ಜನಾರ್ದನ ರೆಡ್ಡಿ ಹಾಗೂ ಬಿ. ಶ್ರೀರಾಮುಲು ಅವರ ನೂರಾರು ಬೆಂಬಲಿಗರು ಸ್ಥಳಕ್ಕೆ ಜಮಾಯಿಸಿದ್ದರು.

ವಿಷಯ ತಿಳಿಯುತ್ತಿದ್ದಂತೆಯೇ ಜನಾರ್ದನ ರೆಡ್ಡಿ ಅವರು ಬಳ್ಳಾರಿ ಎಸ್ಪಿ ಡಾ. ಸುಮನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.

Must Read