ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ–ನ್ಯೂಜಿಲೆಂಡ್ ಎರಡನೇ ಟಿ20 ಪಂದ್ಯದಲ್ಲಿ ಯುವ ವೇಗಿ ಹರ್ಷಿತ್ ರಾಣಾ ಎಲ್ಲರ ಗಮನ ಸೆಳೆದಿದ್ದಾರೆ. ಆರಂಭದಲ್ಲೇ ಆಕ್ರಮಣಕಾರಿ ಆಟವಾಡುತ್ತಿದ್ದ ನ್ಯೂಜಿಲೆಂಡ್‌ನ ಸ್ಟಾರ್ ಬ್ಯಾಟರ್ ಡೆವೊನ್ ಕಾನ್ವೇ ಅವರನ್ನು ಔಟ್ ಮಾಡುವ ಮೂಲಕ ಹರ್ಷಿತ್ ಪಂದ್ಯದ ದಿಕ್ಕನ್ನೇ ತಿರುಗಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕಿವೀಸ್ ತಂಡಕ್ಕೆ ಕಾನ್ವೇ ವೇಗದ ಆರಂಭ ನೀಡಿದರು. ಕೇವಲ 9 ಎಸೆತಗಳಲ್ಲಿ 19 ರನ್ ಗಳಿಸಿ ಅವರು ಬೌಂಡರಿಗಳ ಮೂಲಕ ಒತ್ತಡ ಸೃಷ್ಟಿಸಿದರು. ಈ ಹಂತದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಚೆಂಡನ್ನು ಹರ್ಷಿತ್ ರಾಣಾಗೆ ಒಪ್ಪಿಸಿದರು. ನಾಯಕನ ವಿಶ್ವಾಸಕ್ಕೆ ತಕ್ಕಂತೆ ಬೌಲಿಂಗ್ ಮಾಡಿದ ಹರ್ಷಿತ್, ನಿಖರ ಲೈನ್–ಲೆಂಗ್ತ್‌ನೊಂದಿಗೆ ಕಾನ್ವೇ ಅವರನ್ನು ವಂಚಿಸಿ ವಿಕೆಟ್ ಕಬಳಿಸಿದರು.
ವಿಕೆಟ್ ಪಡೆದ ಬಳಿಕ ಹರ್ಷಿತ್ ರಾಣಾ ಮಾಡಿದ ಸಂಭ್ರಮಾಚರಣೆ ಮತ್ತಷ್ಟು ಕುತೂಹಲ ಮೂಡಿಸಿತು. ಅವರು ಕಾನ್ವೇ ಕಡೆ ನಾಲ್ಕು ಬೆರಳುಗಳನ್ನು ತೋರಿಸಿದರು. ಇದರ ಹಿಂದಿನ ಅರ್ಥವೂ ವಿಶೇಷವಾಗಿತ್ತು. ಈ ನ್ಯೂಜಿಲೆಂಡ್ ಪ್ರವಾಸದ ಒಡಿಐ ಮತ್ತು ಟಿ20 ಸೇರಿ ಒಟ್ಟಾರೆ ನಾಲ್ಕು ಬಾರಿ ಕಾನ್ವೇ ಅವರನ್ನು ಹರ್ಷಿತ್ ಔಟ್ ಮಾಡಿದ್ದಾರೆ.


