ಎಲ್ಲಾ ರೈಸ್ ಐಟಂಗಳು ಖಾರವಾಗಿರಬೇಕು ಅನ್ನೋ ನಿಯಮ ಇಲ್ಲ. ಕೆಲವು ರೈಸ್ ಐಟಂಗಳು ಮನಸ್ಸಿಗೆ ಇಷ್ಟವಾಗಿ, ಮೂಗಿನೊಳಗೆ ಸುಗಂಧ ತುಂಬುತ್ತವೆ, ನಾಲಿಗೆಯ ಮೇಲೆ ನಿಧಾನವಾಗಿ ಕರಗುತ್ತವೆ. ಅಂಥದೇ ಒಂದು ವಿಶೇಷ ಅನ್ನ ರಾಯಲ್ ಕಾಶ್ಮೀರಿ ಪುಲಾವ್.
ಬೇಕಾಗುವ ಸಾಮಗ್ರಿಗಳು
ಬಾಸ್ಮತಿ ಅಕ್ಕಿ – 1 ಕಪ್
ನೀರು – 2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ – 3 ಟೇಬಲ್‌ಸ್ಪೂನ್
ದಾಲ್ಚಿನ್ನಿ – 1 ಚಿಕ್ಕ ತುಂಡು
ಏಲಕ್ಕಿ – 3
ಲವಂಗ – 3
ಜೀರಿಗೆ – 1 ಟೀಸ್ಪೂನ್
ಈರುಳ್ಳಿ – 1 (ಸಣ್ಣಗೆ ಸ್ಲೈಸ್ ಮಾಡಿದ್ದು)
ಕೇಸರಿ – (ಬಿಸಿ ಹಾಲಿನಲ್ಲಿ ನೆನೆಸಿದ್ದು)
ಹಾಲು – ¼ ಕಪ್
ಸಕ್ಕರೆ – 1–2 ಟೇಬಲ್‌ಸ್ಪೂನ್ (ರುಚಿಗೆ ತಕ್ಕಂತೆ)
ಡ್ರೈಫ್ರೂಟ್ಸ್ & ಹಣ್ಣುಗಳು
ಗೋಡಂಬಿ – 10–12
ಬಾದಾಮಿ – 10 (ಸ್ಲೈಸ್ ಮಾಡಿದ)
ಒಣ ದ್ರಾಕ್ಷಿ – 2 ಟೇಬಲ್‌ಸ್ಪೂನ್
ಆಪಲ್ – ½ ಕಪ್
ದ್ರಾಕ್ಷಿ – ½ ಕಪ್
ಅನಾನಸ್ – ¼ ಕಪ್ (ಐಚ್ಛಿಕ)
ತಯಾರಿಸುವ ವಿಧಾನ
ಮೊದಲು ಬಾಸ್ಮತಿ ಅಕ್ಕಿಯನ್ನು 20–30 ನಿಮಿಷ ನೆನೆಸಿ, ನಂತರ 2 ಕಪ್ ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಬೇಯಿಸಿ. ಅಕ್ಕಿ ಮುದ್ದೆಯಾಗದೇ, ಉದುರುದುರಾಗಿ ಬೇಯಬೇಕು. ಬೇಯಿಸಿದ ನಂತರ ನೀರು ಹಿಂಡಿ ಬದಿಗೆ ಇಡಿ.
ಒಂದು ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ. ಅದಕ್ಕೆ ಗೋಡಂಬಿ, ಬಾದಾಮಿ, ಒಣದ್ರಾಕ್ಷಿ ಹಾಕಿ ಗೋಲ್ಡನ್ ಕಲರ್ ಬರುವವರೆಗೂ ಹುರಿದು ತೆಗೆದಿಡಿ. ಅದೇ ತುಪ್ಪದಲ್ಲಿ ದಾಲ್ಚಿನ್ನಿ, ಏಲಕ್ಕಿ, ಲವಂಗ, ಜೀರಿಗೆ ಹಾಕಿ ಸುಗಂಧ ಬರಲು ಬಿಡಿ.
ಈಗ ಸ್ಲೈಸ್ ಮಾಡಿದ ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿ ಬ್ರೌನ್ ಆಗಬಾರದು ಅನ್ನೋದು ಮುಖ್ಯ. ನಂತರ ಆಪಲ್, ದ್ರಾಕ್ಷಿ, ಅನಾನಸ್ ಹಾಕಿ 2–3 ನಿಮಿಷ ಸಾಫ್ಟ್ ಆಗುವವರೆಗೂ ಬೇಯಿಸಿ.
ಇದಕ್ಕೆ ಹಾಲಿನಲ್ಲಿ ನೆನೆಸಿದ ಕೇಸರಿ, ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ. ಈಗ ಅನ್ನವನ್ನು ನಿಧಾನವಾಗಿ ಸೇರಿಸಿ. ಮೇಲೆ ಹುರಿದ ಡ್ರೈಫ್ರೂಟ್ಸ್ ಹಾಕಿ, ಲೈಟ್ ಆಗಿ ಮಿಕ್ಸ್ ಮಾಡಿ. ಮುಚ್ಚಳ ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ದಮ್ ಕೊಡಿ.



