ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ತಂಡ ಟಿ20 ಕ್ರಿಕೆಟ್‌ನಲ್ಲಿ ತನ್ನ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಐದು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ನೀಡಿದ್ದ 209 ರನ್‌ಗಳ ದೊಡ್ಡ ಗುರಿಯನ್ನು ಟೀಮ್ ಇಂಡಿಯಾ ಸುಲಭವಾಗಿ ಬೆನ್ನಟ್ಟಿಸಿ ಭರ್ಜರಿ ಜಯ ದಾಖಲಿಸಿದೆ. ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡರೂ, ಇಶಾನ್ ಕಿಶನ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಅಬ್ಬರದ ಆಟದಿಂದ ಪಂದ್ಯದ ದಿಕ್ಕೇ ಬದಲಾಯಿತು.
ಗುರಿ ಬೆನ್ನಟ್ಟುವ ವೇಳೆ ಮೊದಲ ಓವರ್‌ಗಳಲ್ಲೇ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಔಟಾಗಿ ಭಾರತ ಸಂಕಷ್ಟಕ್ಕೆ ಸಿಲುಕಿತು. ಆದರೆ ನಂತರ ಕ್ರೀಸ್‌ಗೆ ಬಂದ ಇಶಾನ್ ಕಿಶನ್, ಸೂರ್ಯಕುಮಾರ್ ಜೊತೆಗೂಡಿ ಕಿವೀಸ್ ಬೌಲರ್‌ಗಳ ಮೇಲೆ ದಾಳಿ ನಡೆಸಿದರು. ಈ ಜೋಡಿ ಕೇವಲ 49 ಎಸೆತಗಳಲ್ಲಿ 122 ರನ್ ಸೇರಿಸಿ ಪಂದ್ಯವನ್ನು ಸಂಪೂರ್ಣವಾಗಿ ಭಾರತದ ವಶಕ್ಕೆ ತಂದಿತು. ಇಶಾನ್ ಕಿಶನ್ 34 ಎಸೆತಗಳಲ್ಲಿ 76 ರನ್ ಗಳಿಸಿ ಔಟಾದರೆ, ಸೂರ್ಯಕುಮಾರ್ 37 ಎಸೆತಗಳಲ್ಲಿ ಅಜೇಯ 82 ರನ್ ಸಿಡಿಸಿ ಫಾರ್ಮ್‌ಗೆ ಮರಳಿದರು. ಕೊನೆಯಲ್ಲಿ ಶಿವಂ ದುಬೆ ವೇಗದ 36 ರನ್ ಗಳಿಸಿ ಗೆಲುವಿಗೆ ಮುದ್ರೆ ಹಾಕಿದರು.
ಭಾರತ ತಂಡ 15.2 ಓವರ್‌ಗಳಲ್ಲೇ ಗುರಿ ತಲುಪಿ, ಟಿ20 ಇತಿಹಾಸದ ತನ್ನ ಜಂಟಿ ಗರಿಷ್ಠ ರನ್ ಚೇಸ್ ದಾಖಲೆಯನ್ನು ಮತ್ತೊಮ್ಮೆ ಸಾಧಿಸಿತು. ನ್ಯೂಜಿಲ್ಯಾಂಡ್ ಬೌಲರ್‌ಗಳು ದುಬಾರಿಯಾಗಿ ರನ್‌ಗಳ ಸುರಿಮಳೆಗೆ ತುತ್ತಾದರು. ಈ ಜಯದೊಂದಿಗೆ ಸರಣಿಯಲ್ಲಿ ಟೀಮ್ ಇಂಡಿಯಾ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.




