ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ವಾಯವ್ಯ ಭಾಗದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದ ಭೀಕರ ಆತ್ಮಾಹುತಿ ಬಾಂಬ್ ದಾಳಿ ಮದುವೆ ಸಂಭ್ರಮವನ್ನು ಕ್ಷಣಾರ್ಧದಲ್ಲಿ ಶೋಕಕ್ಕೆ ತಿರುಗಿಸಿದೆ. ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿರುವ ಶಾಂತಿ ಸಮಿತಿ ಸದಸ್ಯರೊಬ್ಬರ ಮನೆಯಲ್ಲಿ ವಿವಾಹ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಸ್ಫೋಟ ಸಂಭವಿಸಿದ್ದು, ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಸ್ಫೋಟದ ತೀವ್ರತೆಗೆ ಮದುವೆ ಮನೆಯ ಛಾವಣಿ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಅವಶೇಷಗಳಡಿ ಹಲವರು ಸಿಲುಕಿದ್ದರಿಂದ ಆರಂಭಿಕ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಎದುರಾಯಿತು. ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ, ಇದು ಆತ್ಮಾಹುತಿ ಬಾಂಬ್ ದಾಳಿ ಎಂದು ದೃಢಪಡಿಸಿದ್ದಾರೆ.
ಖೈಬರ್ ಪಖ್ತುಂಖ್ವಾ ರೆಸ್ಕ್ಯೂ 1122 ವಕ್ತಾರ ಬಿಲಾಲ್ ಅಹ್ಮದ್ ಫೈಜಿ ಮಾಹಿತಿ ನೀಡಿದ್ದು, ಏಳು ಮೃತದೇಹಗಳನ್ನು ಸ್ಥಳದಿಂದ ಹೊರತೆಗೆಯಲಾಗಿದೆ. ಗಾಯಗೊಂಡವರನ್ನು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯನ್ನು ಪ್ರಾಂತ್ಯದ ಮುಖ್ಯಮಂತ್ರಿ ಸೋಹೈಲ್ ಅಫ್ರಿದಿ ತೀವ್ರವಾಗಿ ಖಂಡಿಸಿದ್ದು, ದಾಳಿಕೋರರ ಪತ್ತೆಗೆ ತ್ವರಿತ ತನಿಖೆ ನಡೆಸುವಂತೆ ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.



