February 3, 2026
Tuesday, February 3, 2026
spot_img

National Girl Child Day | ಸಮಾನತೆಗೆ ಒಂದು ದಿನ, ಸಬಲತೆಗೆ ಒಂದು ಸಂದೇಶ!

ಒಮ್ಮೆ ಮೌನವಾಗಿ ಸಮಾಜದ ಅಂಚಿನಲ್ಲಿ ನಿಂತಿದ್ದ ಹೆಣ್ಣು ಮಕ್ಕಳು, ಇಂದು ತಮ್ಮ ಕನಸುಗಳೊಂದಿಗೆ ಜಗತ್ತಿನ ಮುಂದೆ ಹೆಜ್ಜೆ ಇಡುತ್ತಿದ್ದಾರೆ. ಆದರೆ ಇನ್ನೂ ಶಿಕ್ಷಣ, ಆರೋಗ್ಯ, ಸುರಕ್ಷತೆ, ಸಮಾನ ಅವಕಾಶಗಳ ವಿಷಯದಲ್ಲಿ ಅನೇಕ ಸವಾಲುಗಳು ಎದುರಾಗುತ್ತಲೇ ಇವೆ. ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಮಹತ್ವವನ್ನು ನೆನಪಿಸಿಕೊಳ್ಳಲು, ಅವರ ಹಕ್ಕುಗಳ ಬಗ್ಗೆ ಸಮಾಜವನ್ನು ಎಚ್ಚರಗೊಳಿಸಲು ವಿಶೇಷವಾಗಿ ಆಚರಿಸಲಾಗುವ ದಿನವೇ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ಇದು ಕೇವಲ ಆಚರಣೆ ಅಲ್ಲ, ಸಮಾಜದ ಮನಸ್ಥಿತಿಯನ್ನು ಬದಲಾಯಿಸುವ ಒಂದು ಸಂಕಲ್ಪ.

ಭಾರತದಲ್ಲಿ ಹೆಣ್ಣು ಮಕ್ಕಳ ಸ್ಥಿತಿಗತಿಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ 2008ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆರಂಭಿಸಿತು. ಹೆಣ್ಣು ಮಕ್ಕಳ ಮೇಲಿನ ಭೇದಭಾವ, ಬಾಲ್ಯವಿವಾಹ, ಶಿಕ್ಷಣದಿಂದ ದೂರವಿಡುವ ಪ್ರವೃತ್ತಿ ಇವುಗಳ ವಿರುದ್ಧ ಧ್ವನಿ ಎತ್ತುವ ಅಗತ್ಯ ಹೆಚ್ಚಿದ ಹಿನ್ನೆಲೆಯಲ್ಲಿ ಈ ದಿನಕ್ಕೆ ಮಹತ್ವ ಬಂದಿದೆ.

ಜನವರಿ 24ರಂದೇ ಏಕೆ ಆಚರಣೆ?

ಜನವರಿ 24, 1966ರಂದು ಇಂದಿರಾ ಗಾಂಧಿ ಅವರು ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಈ ದಿನವು ಮಹಿಳೆಯರ ನಾಯಕತ್ವ, ಸಾಮರ್ಥ್ಯ ಮತ್ತು ಸಬಲತೆಯ ಸಂಕೇತವಾಗಿರುವುದರಿಂದ, ಹೆಣ್ಣು ಮಕ್ಕಳಿಗೆ ಪ್ರೇರಣೆಯ ದಿನವಾಗಿ ಆಯ್ಕೆ ಮಾಡಲಾಗಿದೆ.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಮಹತ್ವ:

ಈ ದಿನ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು, ಉತ್ತಮ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಸುರಕ್ಷಿತ ಜೀವನದ ಅಗತ್ಯವನ್ನು ಸಮಾಜಕ್ಕೆ ನೆನಪಿಸುತ್ತದೆ. ಹೆಣ್ಣು ಮಗು ಕುಟುಂಬಕ್ಕೂ ಸಮಾಜಕ್ಕೂ ಭಾರವಲ್ಲ, ಶಕ್ತಿಯ ಮೂಲ ಎಂಬ ಅರಿವನ್ನು ಬೆಳೆಸುವುದು ಇದರ ಮುಖ್ಯ ಉದ್ದೇಶ. ಜೊತೆಗೆ, ಹೆಣ್ಣು ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಿ, ತಮ್ಮ ಕನಸುಗಳನ್ನು ಸಾಧಿಸಲು ಪ್ರೇರೇಪಿಸುವ ಸಂದೇಶವನ್ನೂ ಈ ದಿನ ನೀಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !