ಹೊಸದಿಗಂತ ವರದಿ ಹುಬ್ಬಳ್ಳಿ:
ನಗರದ ಮಂಟೂರ ರಸ್ತೆ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಏರ್ಪಡಿಸಿದ್ದ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಬಂದವರ ಮೇಲೆ ಕಟೌಟ್ ಬಿದ್ದು ಗಂಭೀರ ಗಾಯಗೊಂಡವರನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಕೆಎಂಸಿ-ಆರ್‌ಐ ಹಾಗೂ ಸುಚಿರಾಯು ಆಸ್ಪತ್ರೆಯಲ್ಲಿ ಗಾಯಗೊಂಡಿರುವ ಬ್ಯಾಹಟ್ಟಿ ಗ್ರಾಮದ ಶಂಕರ ಹಡಪದ ಹಾಗೂ ಗಂಗಾಧರ ನಗರದ ಶಾಂತಾ ಕ್ಯಾರಕಟ್ಟಿ ಅವರನ್ನು ಸುಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದ ಸಚಿವರು ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಿದರು. ಕೆಎಂಸಿ-ಆರ್‌ಐ ಆಸ್ಪತ್ರೆಯಲ್ಲಿ ಶಾಂತಿನಗರದ ಮಂಜುನಾಥ ವೆರ್ಣೇಕರ ಅವರನ್ನು ದಾಖಲಿಸಲಾಗಿದೆ.
ಮನೆಯಿಲ್ಲದವರಿಗೆ ಮನೆ ಹಂಚಿಕೆ ಮಾಡುತ್ತಾರೆ ಎನ್ನುವ ಸುದ್ದಿ ಕೇಳಿ, ಕಾರ್ಯಕ್ರಮ ಸ್ಥಳಕ್ಕೆ ತಾಯಿಯ ಜೊತೆ ಬಂದಿದ್ದೆ. ಆಟೋ ಇಳಿದು ಪೆಂಡಾಲ್ ಕಡೆ ತೆರಳುತ್ತಿದ್ದಾಗ ಎಡಗಡೆ ಅಳವಡಿಸಿದ್ದ ಬೃಹತ್ ಕಟೌಟ್ ಏಕಾಏಕಿ ಬಿದ್ದಿದೆ. ಅದರ ಅಡಿ ತಾಯಿ ಶಾಂತಾ ಅವರು ಸೇರಿ ಮೂರು ಮಂದಿ ಸಿಲುಕಿ ಗಾಯಗೊಂಡಿದ್ದಾರೆ. ನಾನು ಸೇರಿ ಕೆಲವು ಪೊಲೀಸರು ತಪ್ಪಿಸಿಕೊಂಡಿದ್ದೇವೆ ಎಂದು ಗಾಯಾಳು ಶಾಂತಾ ಅವರ ಪುತ್ರ ಶಶಿಕಾಂತ ಕ್ಯಾರಕಟ್ಟಿ ಹೇಳಿದ್ದಾರೆ.



