ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದ್ಯ ಸೇವಿಸಿ ಹಾಸ್ಟೆಲ್‌ಗೆ ಬಂದಿದ್ದ ವಿಚಾರಕ್ಕೆ ಗದರಿದ ಪರಿಣಾಮ ಮನನೊಂದ ಬಿ.ಟೆಕ್ ವಿದ್ಯಾರ್ಥಿಯೊಬ್ಬ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಝಾನ್ಸಿ ಜಿಲ್ಲೆಯ ಉದಿತ್ ಸೋನಿ ಎಂದು ಗುರುತಿಸಲಾಗಿದೆ.
ನಾಲೆಡ್ಜ್ ಪಾರ್ಕ್–3 ಪ್ರದೇಶದಲ್ಲಿರುವ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ. ಶುಕ್ರವಾರ ರಾತ್ರಿ ಸ್ನೇಹಿತರೊಂದಿಗೆ ಮದ್ಯ ಸೇವಿಸಿ ಹಾಸ್ಟೆಲ್‌ಗೆ ಮರಳಿದ ಉದಿತ್‌ನ್ನು ಹಾಸ್ಟೆಲ್ ಆಡಳಿತ ಮಂಡಳಿ ತರಾಟೆಗೆ ತೆಗೆದುಕೊಂಡಿದೆ. ಈ ವೇಳೆ ಆತನ ಸ್ಥಿತಿಯನ್ನು ವಿಡಿಯೋ ಮಾಡಿ ತಂದೆ ವಿಜಯ್ ಸೋನಿಗೆ ಕಳುಹಿಸಲಾಗಿದೆ ಎನ್ನಲಾಗಿದೆ.
ವಿಡಿಯೋ ನೋಡಿದ ತಂದೆ ಉದಿತ್‌ಗೆ ಕರೆ ಮಾಡಿ ತೀವ್ರವಾಗಿ ಗದರಿಸಿದ್ದು, ಹಾಸ್ಟೆಲ್‌ನಿಂದ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿರುವುದರಿಂದ ಆತ ಮಾನಸಿಕವಾಗಿ ಕುಗ್ಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಶನಿವಾರ ಮುಂಜಾನೆ ಉದಿತ್ ಹಾಸ್ಟೆಲ್ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಆತ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.



