ಹೊಸದಿಗಂತ ಡಿಜಿಟಲ್ ಡೆಸ್ಕ್:
“ದೇಶದ ಭದ್ರತೆ ಮತ್ತು ಹಿತಾಸಕ್ತಿಯ ವಿಷಯ ಬಂದಾಗ ರಾಜಕೀಯ ಪಕ್ಷಗಳಿಗಿಂತ ರಾಷ್ಟ್ರವೇ ಮೊದಲು” ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಪ್ರತಿಪಾದಿಸಿದ್ದಾರೆ. ಕೇರಳ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು, 2025ರ ‘ಆಪರೇಷನ್ ಸಿಂಧೂರ್’ ಮಿಲಿಟರಿ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡ ತಮ್ಮ ನಿಲುವಿನ ಬಗ್ಗೆ ಯಾವುದೇ ವಿಷಾದವಿಲ್ಲ ಎಂದು ಸ್ಪಷ್ಟಪಡಿಸಿದರು.
2025ರ ಮೇ ತಿಂಗಳಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಪಾಕಿಸ್ತಾನ ಪ್ರೇರಿತ ಭಯೋತ್ಪಾದನಾ ಕೇಂದ್ರಗಳ ಮೇಲೆ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಕೇಂದ್ರ ಸರ್ಕಾರದ ಈ ಕ್ರಮವನ್ನು ಶಶಿ ತರೂರ್ ಮುಕ್ತವಾಗಿ ಶ್ಲಾಘಿಸಿದ್ದರು. ಅಲ್ಲದೆ, ಪಾಕಿಸ್ತಾನದ ಭಯೋತ್ಪಾದನೆಯನ್ನು ಜಗತ್ತಿಗೆ ಮನವರಿಕೆ ಮಾಡಲು ಕೇಂದ್ರ ಸರ್ಕಾರ ಕಳುಹಿಸಿದ ಸರ್ವಪಕ್ಷ ನಿಯೋಗದ ನೇತೃತ್ವವನ್ನೂ ವಹಿಸಿದ್ದರು. ಆದರೆ, ಈ ವಿಚಾರದಲ್ಲಿ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತಬೇಕೆಂಬ ಕಾಂಗ್ರೆಸ್ ಪಕ್ಷದ ಅಧಿಕೃತ ಸೂಚನೆಯನ್ನು ತರೂರ್ ವಿರೋಧಿಸಿದ್ದರು, ಇದು ಪಕ್ಷದ ಕೆಂಗಣ್ಣಿಗೆ ಗುರಿಯಾಗಿತ್ತು.
ಈ ಬಗ್ಗೆ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು, “ನಾನು ಸಂಸತ್ತಿನಲ್ಲಿ ಕಾಂಗ್ರೆಸ್‌ನ ಯಾವುದೇ ಮೂಲಭೂತ ತತ್ವಗಳನ್ನು ಉಲ್ಲಂಘಿಸಿಲ್ಲ. ಆದರೆ ‘ಆಪರೇಷನ್ ಸಿಂಧೂರ್’ ವಿಷಯದಲ್ಲಿ ನನ್ನದು ದೃಢವಾದ ನಿಲುವಿದೆ. ನಾವು ಅಭಿವೃದ್ಧಿಯತ್ತ ಸಾಗುತ್ತಿರುವ ದೇಶ. ಹೂಡಿಕೆದಾರರು ಯುದ್ಧ ಪೀಡಿತ ಪ್ರದೇಶಗಳನ್ನು ಇಷ್ಟಪಡುವುದಿಲ್ಲ. ಹಾಗಾಗಿ ನಮಗೆ ಪಾಕಿಸ್ತಾನದೊಂದಿಗೆ ಪೂರ್ಣ ಪ್ರಮಾಣದ ಯುದ್ಧ ಬೇಕಾಗಿಲ್ಲ, ಬದಲಾಗಿ ಭಯೋತ್ಪಾದನೆಯ ನಿರ್ಮೂಲನೆಯೇ ನಮ್ಮ ಗುರಿಯಾಗಬೇಕು” ಎಂದರು.
ತಮ್ಮ ಅಂಕಣವೊಂದರಲ್ಲಿ ‘ಹಾರ್ಡ್ ಹಿಟ್, ಹಿಟ್ ಸ್ಮಾರ್ಟ್’ ಎಂದು ಉಲ್ಲೇಖಿಸಿದ್ದನ್ನು ನೆನಪಿಸಿಕೊಂಡ ಅವರು, “ನಾವು ದಾಳಿ ಮಾಡುತ್ತಿರುವುದು ಪಾಕಿಸ್ತಾನದ ಮೇಲಲ್ಲ, ಅಲ್ಲಿರುವ ಭಯೋತ್ಪಾದಕರ ಮೇಲೆ. ಭಾರತದ ರಾಷ್ಟ್ರೀಯ ಭದ್ರತೆಯ ಪ್ರಶ್ನೆ ಬಂದಾಗ ಯಾವುದೇ ಪಕ್ಷಕ್ಕಿಂತ ದೇಶವೇ ದೊಡ್ಡದು. ನಾವು ರಾಜಕೀಯವಾಗಿ ಭಿನ್ನಾಭಿಪ್ರಾಯ ಹೊಂದಿರಬಹುದು, ಆದರೆ ರಾಷ್ಟ್ರದ ಹಿತಾಸಕ್ತಿ ಬಂದಾಗ ಭಾರತವೇ ಮೇಲುಗೈ ಸಾಧಿಸಬೇಕು” ಎಂದು ಮಾರ್ಮಿಕವಾಗಿ ನುಡಿದರು.



