Saturday, January 24, 2026
Saturday, January 24, 2026
spot_img

ಸಾಲವೂ ಇಲ್ಲ, ಕೆಲಸವೂ ಇಲ್ಲ: ಇ-ಖಾತಾ ಸ್ಥಗಿತದಿಂದ ಸ್ತಬ್ಧವಾದ ರಿಯಲ್ ಎಸ್ಟೇಟ್ ಲೋಕ!

ಹೊಸದಿಗಂತ ತುಮಕೂರು:

ಜಿಲ್ಲೆಯಲ್ಲಿ ಕಳೆದ 45 ದಿನಗಳಿಂದ ಇ-ಖಾತಾ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದ್ದು, ಇದರಿಂದ ಸಾರ್ವಜನಿಕರು ಹಾಗೂ ಉದ್ದಿಮೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕೆಂದು ಜಿಲ್ಲಾ ಲ್ಯಾಂಡ್ ಡೆವಲಪರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಪಿ. ಚಿದಾನಂದ್ ಒತ್ತಾಯಿಸಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇ-ಖಾತಾ ವಿತರಣೆಯಲ್ಲಿ ಉಂಟಾಗಿರುವ ಗೊಂದಲಗಳ ಬಗ್ಗೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಹೊಸ ಇ-ಪೌತಿ ಸಾಫ್ಟ್‌ವೇರ್ ಅಳವಡಿಕೆಯಿಂದಾಗಿ ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಖಾತಾ ಪ್ರಕ್ರಿಯೆಗಳು ನಿಂತಿವೆ. ಪ್ರಾಯೋಗಿಕವಾಗಿ ಪರೀಕ್ಷಿಸದೆ ಹೊಸ ವ್ಯವಸ್ಥೆ ಜಾರಿ ಮಾಡಿರುವುದು ದೊಡ್ಡ ಎಡವಟ್ಟು ಎಂದು ಅವರು ಟೀಕಿಸಿದರು.

ಇ-ಖಾತಾ ಸಿಗದೆ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಸಿಸಿ (CC) ಮತ್ತು ಒಸಿ (OC) ಪಡೆಯುವ ಪ್ರಕ್ರಿಯೆಗಳು ವರ್ಷಗಟ್ಟಲೆ ವಿಳಂಬವಾಗುತ್ತಿದ್ದು, ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ.

ಆಂಧ್ರಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ನಿಯಮಗಳು ಅತ್ಯಂತ ಜಟಿಲವಾಗಿವೆ. ಇದರಿಂದ ಬೇಸತ್ತ ಹೂಡಿಕೆದಾರರು ರಾಜ್ಯದಿಂದ ಹೊರಹೋಗುವ ಆತಂಕ ಎದುರಾಗಿದೆ ಎಂದು ಚಿದಾನಂದ್ ಆತಂಕ ವ್ಯಕ್ತಪಡಿಸಿದರು.

ಪೂರ್ಣಗೊಂಡ ಬಡಾವಣೆಗಳಿಗೆ ಲೈಸೆನ್ಸ್ ನೀಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಎಂಇಆರ್-19 (MER-19) ಮಾರ್ಗಸೂಚಿಗಳಲ್ಲಿನ ಗೊಂದಲ ಹಾಗೂ ಪಾರ್ಕ್, ರಸ್ತೆಗಳ ಡೀಡ್ ನೀಡುವ ಪ್ರಕ್ರಿಯೆಯೂ ವಿಳಂಬವಾಗುತ್ತಿದೆ.

“ಹೊಸ ಸಾಫ್ಟ್‌ವೇರ್ ಸರಿಯಾಗುವವರೆಗೆ ಹಳೆಯ ವ್ಯವಸ್ಥೆಯನ್ನೇ ಮುಂದುವರಿಸಬೇಕು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸ್ಥಗಿತಗೊಂಡಿರುವ ಇ-ಖಾತಾ ವಿತರಣೆಯನ್ನು ಪುನರಾರಂಭಿಸಬೇಕು,” ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಟಿ.ಜೆ. ಸನತ್, ಕೆ.ಜೆ. ಹನುಮಂತರಾಜು, ಗೋಪಿ, ಭಾರಧ್ವಾಜ್ ಹಾಗೂ ಜೆ.ಎಸ್. ಅನಿಲ್‌ಕುಮಾರ್ ಉಪಸ್ಥಿತರಿದ್ದರು.

Must Read