ಹೊಸದಿಗಂತ ತುಮಕೂರು:
ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ನಿರಾಕರಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಡೆದ ಗಂಭೀರ ದಾಳಿ ಎಂದು ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಬಿ. ಶಶಿಧರ್ ಟೂಡಾ ತೀವ್ರವಾಗಿ ಖಂಡಿಸಿದ್ದಾರೆ.
ತಿಪಟೂರು ನಗರಸಭೆ ವೃತ್ತದ ಮುಂಭಾಗದಲ್ಲಿ ನಡೆದ ಈ ಪ್ರತಿಭಟನೆ ಎಲ್ಲರ ಗಮನ ಸೆಳೆಯಿತು. ಯಾವುದೇ ಪಕ್ಷದ ಧ್ವಜ, ವೇದಿಕೆ ಅಥವಾ ಮೈಕ್ ಬಳಸದೆ, ಕೇವಲ ಭಿತ್ತಿಪತ್ರ ಹಿಡಿದು ‘ಏಕವ್ಯಕ್ತಿ ಪ್ರತಿಭಟನೆ’ ನಡೆಸುವ ಮೂಲಕ ಶಶಿಧರ್ ಅವರು ರಾಜ್ಯಪಾಲರ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಅವರು, “ಇಂದು ನಾನು ಇಲ್ಲಿ ಒಬ್ಬನೇ ನಿಂತಿರಬಹುದು, ಆದರೆ ನನ್ನ ಹಿಂದೆ ಕರ್ನಾಟಕದ ಜನತೆಯ ಆಕ್ರೋಶವಿದೆ. ಇದು ವ್ಯಕ್ತಿಗತ ವಿರೋಧವಲ್ಲ, ಬದಲಿಗೆ ಪ್ರಜಾಪ್ರಭುತ್ವದ ಆಶಯಗಳನ್ನು ಹತ್ತಿಕ್ಕುವ ಅಕ್ರಮಣದ ವಿರುದ್ಧದ ಹೋರಾಟ” ಎಂದರು.
ರಾಜ್ಯಪಾಲರು ಅಧಿವೇಶನದಲ್ಲಿ ಭಾಷಣ ಮಾಡುವುದು ಅವರ ವೈಯಕ್ತಿಕ ಆಯ್ಕೆಯಲ್ಲ, ಅದು ಅವರ ಸಂವಿಧಾನಾತ್ಮಕ ಕರ್ತವ್ಯ. ಜನರಿಂದ ಚುನಾಯಿತವಾದ ಸರ್ಕಾರದ ಧ್ವನಿಯನ್ನು ಮೌನಗೊಳಿಸುವ ಪ್ರಯತ್ನ ಇದಾಗಿದೆ. ಕೋಟ್ಯಂತರ ಕನ್ನಡಿಗರು ಮತ ನೀಡಿ ಆರಿಸಿದ ಸರ್ಕಾರದ ಮಾತನ್ನು ತಳ್ಳಿಹಾಕುವುದು ಜನತೆಗೆ ಮಾಡುವ ಅವಮಾನ ಎಂದು ಅವರು ಕಿಡಿಕಾರಿದರು.
ರಾಜ್ಯಪಾಲರ ಈ ನಡೆ ಭವಿಷ್ಯದಲ್ಲಿ ಅಪಾಯಕಾರಿ ಸಂಪ್ರದಾಯಕ್ಕೆ ನಾಂದಿ ಹಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ ಅವರು, “ಇಂದು ಮಾತನಾಡಲು ನಿರಾಕರಿಸಿದವರು ನಾಳೆ ಸರ್ಕಾರದ ನಿರ್ಧಾರಗಳಿಗೂ ಅಡ್ಡಿಪಡಿಸಬಹುದು. ಇದು ವಿಧಾನಸಭೆಯ ಗೌರವವನ್ನು ಕುಂದಿಸಿ, ಪ್ರಜಾಪ್ರಭುತ್ವವನ್ನು ನಿಧಾನವಾಗಿ ಕೊಲ್ಲುವ ದಾರಿಯಾಗಿದೆ” ಎಂದು ಎಚ್ಚರಿಸಿದರು.
“ನಾನು ಇಲ್ಲಿರುವುದು ಗಲಾಟೆ ಮಾಡಲಿಕ್ಕಲ್ಲ, ಬದಲಿಗೆ ವ್ಯವಸ್ಥೆಗೆ ಎಚ್ಚರಿಕೆ ನೀಡಲು. ನಾವು ಇಂದು ಮೌನವಾದರೆ, ಇಂತಹ ಅಸಂವಿಧಾನಿಕ ನಡೆಗಳೇ ನಾಳೆ ಕಾನೂನಾಗುವ ಅಪಾಯವಿದೆ. ನನ್ನ ಈ ಹೋರಾಟದಲ್ಲಿ ರೈತರು, ಕಾರ್ಮಿಕರು, ಯುವಕರು ಮತ್ತು ಮಹಿಳೆಯರ ಧ್ವನಿಯಿದೆ” ಎಂದು ಶಶಿಧರ್ ಭಾವುಕರಾಗಿ ನುಡಿದರು.
ಸಂವಿಧಾನದ ಚೌಕಟ್ಟನ್ನು ಮೀರುವ ಯಾವುದೇ ನಡೆ ಯಾರಿಂದ ಬಂದರೂ ಅದನ್ನು ಒಪ್ಪಲು ಸಾಧ್ಯವಿಲ್ಲ. ಇದು ಕೇವಲ ಪಕ್ಷದ ಪ್ರಶ್ನೆಯಲ್ಲ, ನಮ್ಮ ಹಕ್ಕಿನ ಪ್ರಶ್ನೆ ಎಂದು ಸ್ಪಷ್ಟಪಡಿಸಿದ ಅವರು, “ಜೈ ಸಂವಿಧಾನ, ಜೈ ಕರ್ನಾಟಕ” ಎಂದು ಘೋಷಣೆ ಕೂಗುವ ಮೂಲಕ ಪ್ರತಿಭಟನೆ ಮುಕ್ತಾಯಗೊಳಿಸಿದರು.



